ಉಡುಪಿ, ಫೆ.7: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ದೈಹಿಕ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಪೊಕ್ಸೋ ಪ್ರಕರಣದ ಆರೋಪಿ ಮಲತಂದೆಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಿತಾವಧಿ ಜೈಲುಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಗಣೇಶ್ ನಾಯ್ಕ(49) ಎಂದು ಗುರುತಿಸಲಾಗಿದೆ. ನೊಂದ ಬಾಲಕಿಯ ತಾಯಿಗೆ ಗಣೇಶ್ ನಾಯ್ಕ ಜೊತೆ ಎರಡನೇ ಮದುವೆ ಯಾಗಿದ್ದು, ಈತ ತನ್ನ ಪತ್ನಿಯ ಮಗಳ ಮೇಲೆ 2021 ಅಕ್ಟೋಬರ್ ನಲ್ಲಿ ಜ್ಯೂಸ್ ನಲ್ಲಿ ಮದ್ಯ ಬೆರೆಸಿ ಬಾಲಕಿಗೆ ಕುಡಿಸಿ ಬಲತ್ಕಾರವಾಗಿ ದೈಹಿಕ ದೌರ್ಜನ್ಯ ಎಸಗಿದ್ದನು. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ಬಾಲಕಿಯ ತಾಯಿ 2022ರ ಜನವರಿಯಲ್ಲಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಆಗಿನ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಆರೋಪಿ ವಿರುದ್ಧ ನ್ಯಾಯಾ ಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 33 ಸಾಕ್ಷಿಗಳ ಪೈಕಿ 10 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ, ಜೀವನ ಪರ್ಯಂತ ಜೈಲು ಶಿಕ್ಷೆ ಮತ್ತು 10ಸಾವಿರ ರೂ. ದಂಡ ಮತ್ತು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಮತ್ತು ಅಪ್ರಾಪ್ತ ಬಾಲಕಿಗೆ ದೌರ್ಜನ್ಯ ಎಸಗಿದಕ್ಕೆ 10ಸಾವಿರ ರೂ. ದಂಡ ವಿಧಿಸಿದ್ದಾರೆ.
ಒಟ್ಟು 20ಸಾವಿರ ರೂ. ದಂಡದಲ್ಲಿ 15ಸಾವಿರ ಬಾಲಕಿಗೆ ಮತ್ತು 5ಸಾವಿರ ರೂ. ಸರಕಾರಕ್ಕೆ ನೀಡುವಂತೆ ಮತ್ತು ನೊಂದ ಬಾಲಕಿಗೆ ಸರಕಾರದಿಂದ 3ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿ ಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.