ಆರಂಭದಲ್ಲಿ ಭಾರತೀಯ ಸಂಪ್ರದಾಯ ಕಲಿಯಲು ಕಷ್ಟಪಟ್ಟ ಸೋನಿಯಾ ಗಾಂಧಿಗೆ ರಾಜಕೀಯ ಇಷ್ಟವಿರಲಿಲ್ಲ: ಪ್ರಿಯಾಂಕಾ ಗಾಂಧಿ

ಬೆಂಗಳೂರು: ಆರಂಭದಲ್ಲಿ ಭಾರತೀಯ ಸಂಪ್ರದಾಯ ಕಲಿಯಲು ಕಷ್ಟಪಟ್ಟ ಸೋನಿಯಾ ಗಾಂಧಿ ಅವರಿಗೆ ರಾಜಕೀಯವನ್ನು ಇಷ್ಟಪಟ್ಟಿರಲಿಲ್ಲ ಎಂದು  ಅವರ ಪುತ್ರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ತಿಳಿಸಿದರು.

ಕೆಪಿಸಿಸಿ ಆಯೋಜಿಸಿದ್ದ ಮಹಿಳಾ ಕೇಂದ್ರಿತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ತಾನು ಇಬ್ಬರು ಧೈರ್ಯಶಾಲಿ ಮತ್ತು ಬಲಿಷ್ಠ ಮಹಿಳೆಯರಾದ ಅಜ್ಜಿ ಇಂದಿರಾ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಅವರಿಂದ ಬೆಳೆದಿರುವುದಾಗಿ ಹೇಳಿದರು. 

ಇಂದಿರಾ ಗಾಂಧಿ ತಮ್ಮ 33 ವರ್ಷದ ಮಗ ಸಂಜಯ್ ಗಾಂಧಿ ಅವರನ್ನು ಕಳೆದುಕೊಂಡಾಗ ತನಗೆ ಎಂಟು ವರ್ಷ ವಯಸ್ಸಾಗಿತ್ತು ಎಂದು ನೆನಪಿಸಿಕೊಂಡ ಪ್ರಿಯಾಂಕಾ ಗಾಂಧಿ,  ಸಂಜಯ್ ಗಾಂಧಿ ಮರಣದ ಮರು ದಿನವೇ ಅವರು ರಾಷ್ಟ್ರದ ಸೇವೆಗಾಗಿ ಕೆಲಸಕ್ಕೆ ಹೋದರು ಮತ್ತು ಅದು ಅವರ ಕರ್ತವ್ಯ ಪ್ರಜ್ಞೆ ಮತ್ತು ಅವರ ಆಂತರಿಕ ಶಕ್ತಿಯಾಗಿತ್ತು. ಇಂದಿರಾ ಗಾಂಧಿ ಸಾಯುವವರೆಗೂ ರಾಷ್ಟ್ರ ಸೇವೆಯನ್ನು ಮುಂದುವರೆಸಿದರು ಎಂದು ತಿಳಿಸಿದರು.

ಸೋನಿಯಾ ಗಾಂಧಿ 21ನೇ ವಯಸ್ಸಿನಲ್ಲಿ ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ, ಮದುವೆಯಾಗಲು ಇಟಲಿಯಿಂದ ಭಾರತಕ್ಕೆ ಬಂದರು. ಇಲ್ಲಿನ ಸಂಪ್ರದಾಯ ಕಲಿಯಲು ಸಾಕಷ್ಟು ಹೋರಾಟ ನಡೆಸಿದ್ದಾರೆ. ಎಲ್ಲಾವನ್ನು ಇಂದಿರಾ ಗಾಂಧಿ ಅವರಿಂದ ಕಲಿತ ಸೋನಿಯಾ ಗಾಂಧಿ 44 ನೇ ವಯಸ್ಸಿನಲ್ಲಿ  ಪತಿಯನ್ನು ಕಳೆದುಕೊಂಡರು. ತದ ನಂತರ ರಾಜಕೀಯ ಇಷ್ಟಪಡದಿದ್ದರೂ ದೇಶ ಸೇವೆಯ ಹಾದಿ ಹಿಡಿದರು ಮತ್ತು ಈಗ ಅವರಿಗೆ 76 ವರ್ಷ ವಯಸ್ಸಿನಲ್ಲಿಯೂ ದೇಶ ಸೇವೆ ಮಾಡುತ್ತಿರುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದರು.

ನಿಮ್ಮ ಜೀವನದಲ್ಲಿ ನಿಮಗೆ ಏನಾಗಲಿ, ಅದು ವಿಷಯವೇ ಅಲ್ಲ. ನೀವು ಎಷ್ಟೇ ದೊಡ್ಡ ದುರಂತವನ್ನು ಎದುರಿಸುತ್ತಿರಲಿ, ಅದನ್ನು ಎದುರಿಸುವುದರಲ್ಲಿ ಮುಳುಗಿದ್ದರೂ ಅದು ದೊಡ್ಡ ವಿಚಾರವೇ ಅಲ್ಲ. ಮನೆಯಲ್ಲಾಗಲಿ ಅಥವಾ ಕೆಲಸದಲ್ಲಾಗಲಿ ಅಥವಾ ಹೊರಗಾಗಲಿ, ನಿಮಗಾಗಿ ಎದ್ದುನಿಂತು ಹೋರಾಡುವ ಸಾಮರ್ಥ್ಯ ಹೊಂದಬೇಕು ಎಂಬುದನ್ನು ಇಂದಿರಾಗಾಂಧಿ ಅವರಿಂದ ಸೋನಿಯಾ ಗಾಂಧಿ ಕಲಿತಿರುವುದಾಗಿ ಪ್ರಿಯಾಂಕಾ ಗಾಂಧಿ ತಿಳಿಸಿದರು.

Latest Indian news

Popular Stories