ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆ ಯುವತಿಯ ವೈದ್ಯಕೀಯ ವೆಚ್ಚ ಸರ್ಕಾರ ಭರಿಸುತ್ತದೆ: ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ತನ್ನ ಪ್ರೀತಿಯ ನಿವೇದನೆಯನ್ನು ನಿರಾಕರಿಸಿದಳು ಎಂದು ಆಕ್ರೋಶದಿಂದ ಯುವಕ ಆಸಿಡ್ ಎರಚಿ(Acid attack) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 24 ವರ್ಷದ ಯುವತಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಭರವಸೆ ನೀಡಿದ್ದಾರೆ.

ಎರಡು ದಿನಗಳ ಹಿಂದೆ ಸುಂಕದಕಟ್ಟೆ ಬಳಿ ಕೆಲಸಕ್ಕೆ ಹೊರಟಿದ್ದ ಯುವತಿ ಬಸ್ ನಿಲ್ದಾಣ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಬಂದ ಆರೋಪಿ ಯುವಕ ನಾಗೇಶ್ ಯುವತಿ ಮೇಲೆ ಏಕಾಏಕಿ ಆಸಿಡ್ ಎರಚಿ ಪರಾರಿಯಾಗಿದ್ದು ಆತನಿಗಾಗಿ ಬೆಂಗಳೂರು ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಈ ಮಧ್ಯೆ ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿಯ ಆರೋಗ್ಯ ವಿಚಾರಿಸಲು ಇಂದು ಆರೋಗ್ಯ ಸಚಿವ ಡಾ ಸುಧಾಕರ್ ಭೇಟಿ ನೀಡಿದ್ದರು. ನಂತರ ಹೊರಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತೆಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ವೈಯಕ್ತಿಕವಾಗಿ ನಾನು 5 ಲಕ್ಷ ರೂಪಾಯಿ ಪರಿಹಾರ ನೀಡುತ್ತೇನೆ. ಸಂತ್ರಸ್ತ ಯುವತಿಗೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಯುವತಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ಕೂಡ ಆರೋಗ್ಯ ಸಚಿವರು ನೀಡಿದ್ದಾರೆ. 21ನೇ ಶತಮಾನದ ನಾಗರಿಕ ಸಮಾಜದಲ್ಲಿ ಈ ರೀತಿಯ ಹೃದಯ ಕಲಕುವಂತಹ ಘಟನೆ ನಡೆದಿರುವುದು ತಲೆ ತಗ್ಗಿಸುವ ವಿಚಾರ. ಇದು ರಾಕ್ಷಸಿ ಮನೋಭಾವ, ಯುವತಿಗೆ ಬಿಎಂಸಿಯಿಂದ ಚರ್ಮ ಕಸಿ ಮಾಡಲು ಹೇಳಿದ್ದೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆರೋಪಿಯನ್ನು ಶೀಘ್ರವೇ ಬಂಧಿಸಿ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರ ಜೊತೆ ಚರ್ಚಿಸಿ ವಿಶೇಷವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಮಾಡಿ ತ್ವರಿತವಾಗಿ ಆರೋಪಿಗೆ ಶಿಕ್ಷೆಯಾಗುವಂತೆ ಒತ್ತಾಯಿಸುತ್ತೇನೆ, ಇಂತಹ ಕ್ರೌರ್ಯಕ್ಕೆ ತಕ್ಕ ಶಾಸ್ತಿಯಾಗಿ ಸಮಾಜಕ್ಕೆ, ಜನರಿಗೆ ಇದೊಂದು ಪಾಠವಾಗಬೇಕು ಎಂದರು.

ಸೈಂಟ್ ಜಾನ್ಸ್ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ಪಡೆಯುತ್ತಿರುವ ಯುವತಿ ಬಳಿ ಕರೆದುಕೊಂಡು ಹೋಗಿದ್ದು ಆಕೆಯ ಬಳಿ ಮಾತನಾಡಿ ಧೈರ್ಯ ತುಂಬಿದ್ದೇನೆ. ಸರ್ಕಾರ ಯುವತಿ ಕುಟುಂಬ ಜೊತೆಗಿದೆ. ಮಾನಸಿಕವಾಗಿ ಧೈರ್ಯವಾಗಿರಬೇಕು ಎಂದು ಹೇಳಿದ್ದೇನೆ ಎಂದರು.

Latest Indian news

Popular Stories