ಆಸೀಫ್ ನಾಲ್ಕು ಸಿಕ್ಸರ್: ಪಾಕಿಸ್ತಾನಕ್ಕೆ ರೋಚಕ ಜಯ

ದುಬಾೖ: ಅಫ್ಘಾನಿಸ್ಥಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ಥಾನ ಟಿ20 ವಿಶ್ವಕಪ್‌ನಲ್ಲಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದೆ.

ತನ್ನ ನಾಕೌಟ್‌ ಪ್ರವೇಶವನ್ನು ಖಚಿತಗೊಳಿಸಿದೆ.ಶುಕ್ರವಾರ ರಾತ್ರಿಯ ಮುಖಾಮುಖೀ ಯಲ್ಲಿ ಅಫ್ಘಾನಿಸ್ಥಾನ 6 ವಿಕೆಟಿಗೆ 147 ರನ್‌ ಪೇರಿಸಿದರೆ, ಪಾಕಿಸ್ಥಾನ 19 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 148 ರನ್‌ ಬಾರಿಸಿ ಗೆದ್ದು ಬಂದಿತು.

ಚೇಸಿಂಗ್‌ ವೇಳೆ ನಾಯಕ ಬಾಬರ್‌ ಆಜಂ ಅರ್ಧ ಶತಕ (51) ಬಾರಿಸಿ ತಂಡಕ್ಕೆ ಆಸರೆಯಾದರು, ಆದರೆ ರಶೀದ್‌ ಖಾನ್‌ ತಮ್ಮ ಕಟ್ಟಕಡೆಯ ಎಸೆತದಲ್ಲಿ ಆಜಂ ಅವರನ್ನು ಬೌಲ್ಡ್‌ ಮಾಡುವುದರೊಂದಿಗೆ ಪಂದ್ಯ ರೋಚಕ ತಿರುವು ಕಂಡಿತು. 2 ಓವರ್‌ಗಳಲ್ಲಿ 24 ರನ್‌ ತೆಗೆಯುವ ಸವಾಲು ಎದುರಾಯಿತು. ಕೊನೆಯಲ್ಲಿ ಆಸಿಫ್‌ ಅಲಿ ಸಿಡಿದು ನಿಂತರು. ಕರೀಂ ಜನತ್‌ ಅವರ ಓವರ್‌ನಲ್ಲಿ 4 ಸಿಕ್ಸರ್‌ ಬಾರಿಸಿ ಪಾಕ್‌ ಜಯಭೇರಿ ಮೊಳಗಿಸಿದರು. ಅಲಿ ಗಳಿಕೆ 7 ಎಸೆತಗಳಿಂದ ಅಜೇಯ 25 ರನ್‌.

ನಾಯಕ ನಬಿ ಮತ್ತು ನೈಬ್‌ ಅವರ ಅಜೇಯ ಜತೆಯಾಟ ಅಫ್ಘಾನ್‌ ಚೇತರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಕೆಳ ಹಂತದಲ್ಲಿ ಈ ಜೋಡಿ ಭರ್ಜರಿ ಆಟಕ್ಕಿಳಿಯಿತು. ಮುರಿಯದ 7ನೇ ವಿಕೆಟಿಗೆ 45 ಎಸೆತಗಳಿಂದ 71 ರನ್‌ ಒಟ್ಟುಗೂಡಿಸಿದರು. ಇಬ್ಬರೂ ತಲಾ 35 ರನ್‌ ಮಾಡಿ ಅಜೇಯರಾಗಿ ಉಳಿದರು.

ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ಥಾ ನದ ಯೋಜನೆಯನ್ನು ಪಾಕಿಸ್ಥಾನ ಆರಂಭದಲ್ಲೇ ತಲೆಕೆಳಗಾಗಿಸಿತು. ಸ್ಟಾರ್‌ ಆರಂಭಕಾರ ಹಜ್ರತುಲ್ಲ ಜಜಾಯ್‌ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ ಸೇರಿಕೊಂಡರು. ಮತ್ತೋರ್ವ ಓಪನರ್‌ ಶಾಜಾದ್‌ ಗಳಿಕೆ ಕೇವಲ 8 ರನ್‌.

ಕರೀಂ ಜನತ್‌ 15 ರನ್‌ ಮಾಡಿ ವಾಪಸಾದರು. ಪವರ್‌ ಪ್ಲೇ ಮುಗಿಯುವಷ್ಟರಲ್ಲಿ 49 ರನ್ನಿಗೆ 4 ವಿಕೆಟ್‌ ಉರುಳಿಸಿಕೊಂಡ ಸಂಕಟ ಅಫ್ಘಾನಿಸ್ಥಾನದ್ದಾಯಿತು. ಅರ್ಧ ಹಾದಿ ಕ್ರಮಿಸುವಾಗ ಅರ್ಧದಷ್ಟು ಮಂದಿಯ ವಿಕೆಟ್‌ 65 ರನ್ನಿಗೆ ಉರುಳಿತ್ತು.

ಅನಂತರವೂ ಅಫ್ಘಾನ್‌ ರನ್‌ ಗತಿಯಲ್ಲಿ ಪ್ರಗತಿಯಾಗಲಿಲ್ಲ. ಸಣ್ಣದೊಂದು ಹೋರಾಟ ನಡೆಸುವ ಸೂಚನೆ ನೀಡಿದ ನಜಿಬುಲ್ಲ ಜದ್ರಾನ್‌ 22 ರನ್‌ ಮಾಡಿ ಔಟಾಗುವುದರೊಂದಿಗೆ ನಬಿ ಪಡೆ ಇನ್ನಷ್ಟು ಒತ್ತಡಕ್ಕೆ ಸಿಲುಕಿತು. ಬೌಲಿಂಗ್‌ ದಾಳಿಗಿಳಿದ ಪಾಕಿಸ್ಥಾನದ ಐದೂ ಮಂದಿ ವಿಕೆಟ್‌ ಬೇಟೆಯನ್ನು ಪೂರ್ತಿಗೊಳಿಸಿದರು.

Latest Indian news

Popular Stories

error: Content is protected !!