ಶ್ರೀಕಾಕುಳಂ: ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಎಲಮಂಚಿಲಿ ಗ್ರಾಮದಲ್ಲಿ ಆಸ್ತಿ ವಿವಾದದಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ, ಮಹಿಳೆ ಮತ್ತು ಅವರ ಮಗಳು ಸಾವನ್ನಪ್ಪಿದರೆ, ಅವರ ಇನ್ನೊಬ್ಬ ಮಗಳು ಮತ್ತು ಮಗ ಗಂಭೀರವಾದ ಸುಟ್ಟಗಾಯಗಳಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮೃತರನ್ನು ಚಿಂಟು ಚಿನ್ಮಣಿ (45) ಮತ್ತು ಅವರ ಪುತ್ರಿ ಜಾನ್ವಿ (18) ಎಂದು ಗುರುತಿಸಲಾಗಿದೆ. ಸಹೋದರರಾದ ವೆಂಕಟ ಸಾಯಿ ಸುಶಾಂಕ್ (15) ಮತ್ತು ರಂಜನಿ ಅವರಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ವಿಶಾಖಪಟ್ಟಣಂನ ಪಿನಾಕಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಬ್ ಇನ್ಸ್ ಪೆಕ್ಟರ್ ಪಾರಿ ನಾಯ್ಡು ಮಾತನಾಡಿ, ಕುಟುಂಬದಲ್ಲಿ ಬಹಳ ದಿನಗಳಿಂದ ಆಸ್ತಿ ವಿವಾದವಿತ್ತು. ಚಿನ್ಮಣಿಯ ಅತ್ತೆ ಆಸ್ತಿಯಲ್ಲಿ ಪಾಲು ಕೊಡಲು ಸಾರಾಸಗಟಾಗಿ ನಿರಾಕರಿಸಿದ್ದರು. ಚಿನ್ಮಣಿಯ ಅತ್ತೆ ತನ್ನ ಮಗ (ಚಿನ್ಮಣಿಯ ಪತಿ) ಮತ್ತು ಮಗಳಿಗೆ ಆಸ್ತಿಯನ್ನು ಹಂಚಲು ಬಯಸಿದ್ದರು. ಇದರಿಂದ ಚಿನ್ಮಣಿ ಬಹಳ ದಿನಗಳಿಂದ ಕೋಪಗೊಂಡಿದ್ದರು. ಈ ವಿಚಾರಗಳಿಂದ ನೊಂದು ಅವರು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂದು ತಿಳಿಸಿದರು.
ತೀವ್ರ ಸುಟ್ಟು ಕರಕಲಾದ ರಂಜಿನಿ, ತನ್ನ ತಂದೆ ತಮಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ. ಅಲ್ಲದೆ ಆಸ್ತಿಯನ್ನು ಅಜ್ಜಿ ನೀಡಲು ನಿರಾಕರಿಸಿದರು ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಂಜಿನಿ ಹೇಳಿಕೆಯಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.