ಆ್ಯಶಸ್ ಸರಣಿ: ಮೊದಲ ಟೆಸ್ಟ್ ನಲ್ಲಿ ಇಂಗ್ಲೆಂಡ್ ಮಣಿಸಿ ಅದ್ಭುತ ಗೆಲುವು ಸಾಧಿಸಿದ ಆಸ್ಟ್ರೇಲಿಯಾ

ಬ್ರಿಸ್ಬೇನ್: ಆಶಸ್ ಸರಣಿಯ ಬ್ರಿಸ್ಬೇನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಕಾಂಗರೂ ತಂಡ ಐದು ಟೆಸ್ಟ್‌ಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಇಂಗ್ಲೆಂಡ್ 297 ರನ್ ಗಳಿಸುವಷ್ಟರಲ್ಲಿ ಇಡೀ ತಂಡ ಔಟಾಯಿತು. ಈ ಮೂಲಕ ಆಸ್ಟ್ರೇಲಿಯಾಕ್ಕೆ ಕೇವಲ 20 ರನ್‌ಗಳ ಗುರಿ ಸಿಕ್ಕಿತು. ಒಂದು ವಿಕೆಟ್ ನಷ್ಟದಲ್ಲಿ ಕಾಂಗರೂ ಪಡೆ ಈ ಗೆಲುವು ತನ್ನದಾಗಿಸಿಕೊಂಡಿತು. ಆಸ್ಟ್ರೇಲಿಯಾ ಪರ ಅಲೆಕ್ಸ್ ಕ್ಯಾರಿ 9 ರನ್ ಗಳಿಸಿ ಔಟಾದರು. ಕಾಂಗರೂ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 425 ರನ್ ಗಳಿಸಿತ್ತು ಮತ್ತೊಂದೆಡೆ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 147 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 297 ರನ್ ಗಳಿಸಿತು.

ಮೂರನೇ ದಿನದಾಟದ ಅಂತ್ಯಕ್ಕೆ ನಾಯಕ ಜೋ ರೂಟ್ ಅಜೇಯ 86 ಮತ್ತು ಡೆವಿನ್ ಮಲಾನ್ 80 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ವೇಳೆ ಇಂಗ್ಲೆಂಡ್ ಎರಡು ವಿಕೆಟ್‌ಗೆ 220 ರನ್ ಗಳಿಸಿತ್ತು. ನಾಲ್ಕನೇ ದಿನ ಮುಂದುವರಿಸಿದ ರೂಟ್ ಮತ್ತು ಮಲಾನ್, ತಂಡವನ್ನು ಸೋಲಿಸುವ ಹಂತದಿಂದ ಉಳಿಸಿಕೊಳ್ಳುತ್ತಾರೆ ಅಂತಾ ನಿರೀಕ್ಷೆ ಮಾಡಲಾಗಿತ್ತು. ಆದರೆ, ಇದು ಸಾಧ್ಯವಾಗಲಿಲ್ಲ.

ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಔಟಾದ ನಂತರ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಉಳಿದ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ಬೆನ್ ಸ್ಟೋಕ್ಸ್ 14, ಆಲಿ ಪೋಪ್ 4, ಜೋಸ್ ಬಟ್ಲರ್ 23, ಕ್ರಿಸ್ ವೋಕ್ಸ್ 16, ಆಲಿ ರಾಬಿನ್ಸನ್ 8 ಮತ್ತು ಮಾರ್ಕ್ ವುಡ್ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ದಿನದಂದು ಇಂಗ್ಲೆಂಡ್ ಬ್ಯಾಟ್ಸಮನ್ ಗಳು ಕೇವಲ 77 ರನ್ ಸೇರಿಸಲು ಸಾಧ್ಯವಾಯಿತು. ಅಲ್ಲದೆ, ತಮ್ಮ ಎಲ್ಲಾ ಎಂಟು ವಿಕೆಟ್‌ಗಳನ್ನು ಕಳೆದುಕೊಂಡರು. ಆಸ್ಟ್ರೇಲಿಯಾದ ನಾಥನ್ ಲಿಯಾನ್ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಇಂಗ್ಲೆಂಡ್ ನ ಪ್ರಮುಖ ನಾಲ್ಕು ವಿಕೆಟ್ ಗಳನ್ನು ಕಬಳಿಸಿದರು. ಅಲ್ಲದೆ, ಪ್ಯಾಟ್ ಕಮ್ಮಿನ್ಸ್ 2, ಕ್ಯಾಮರೂನ್ ಗ್ರೀನ್ 2 ವಿಕೆಟ್ ಪಡೆದರು. ಇದಲ್ಲದೇ ಮಿಚೆಲ್ ಸ್ಟಾರ್ಕ್ ಮತ್ತು ಜೋಸ್ ಹ್ಯಾಜಲ್‌ವುಡ್ ತಲಾ ಒಂದು ವಿಕೆಟ್ ಪಡೆದುಕೊಂಡರು.

Latest Indian news

Popular Stories