ಇಂಡೋ-ಪಾಕ್ ವಿಭಜನೆಯ ಎಪ್ಪತ್ತೈದು ವರ್ಷಗಳ ನಂತರ ಒಂದಾದ ಅಣ್ಣ-ತಂಗಿ!

ಇಸ್ಲಾಮಾಬಾದ್: ವಿಭಜನೆಯ ಹಿಂಸಾಚಾರದ ಸಮಯದಲ್ಲಿ ತನ್ನ ಕುಟುಂಬದಿಂದ ಬೇರ್ಪಟ್ಟ ಎಪ್ಪತ್ತೈದು ವರ್ಷಗಳ ನಂತರ, ಮುಸ್ಲಿಂ ದಂಪತಿಗಳು ದತ್ತು ಪಡೆದು ಬೆಳೆದ ಸಿಖ್ ಕುಟುಂಬದಲ್ಲಿ ಜನಿಸಿದ ಮಹಿಳೆಯೊಬ್ಬರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕರ್ತಾರ್‌ಪುರದಲ್ಲಿ ಭಾರತದ ಸಹೋದರರನ್ನು ಭೇಟಿಯಾದರು.

ವಿಭಜನೆಯ ಸಮಯದಲ್ಲಿ, ಸಿಖ್ ಕುಟುಂಬದಲ್ಲಿ ಜನಿಸಿದ ಮುಮ್ತಾಜ್ ಬೀಬಿ, ಹಿಂಸಾತ್ಮಕ ಜನಸಮೂಹದಿಂದ ಕೊಲ್ಲಲ್ಪಟ್ಟ ತಾಯಿಯ ಮೃತದೇಹದ ಮೇಲೆ ಮಲಗಿದ್ದ ಶಿಶುವಾಗಿದ್ದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಮುಹಮ್ಮದ್ ಇಕ್ಬಾಲ್ ಮತ್ತು ಅಲ್ಲಾ ರಾಖಿ ಎಂಬ ದಂಪತಿಗಳು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು ತಮ್ಮ ಸ್ವಂತ ಮಗಳಂತೆ ಬೆಳೆಸಿದರು. ಆಕೆಗೆ ಮುಮ್ತಾಜ್ ಬೀಬಿ ಎಂದು ಹೆಸರಿಟ್ಟರು. ವಿಭಜನೆಯ ನಂತರ, ಇಕ್ಬಾಲ್ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶೇಖುಪುರ ಜಿಲ್ಲೆಯ ವಾರಿಕಾ ಟಿಯಾನ್ ಗ್ರಾಮದಲ್ಲಿ ನೆಲೆಸಿದರು.

ಇಕ್ಬಾಲ್ ಮತ್ತು ಅವನ ಹೆಂಡತಿ ಮುಮ್ತಾಜ್‌ಗೆ ಅವಳು ತಮ್ಮ ಮಗಳಲ್ಲ ಎಂದು ಹೇಳಲಿಲ್ಲ. ಎರಡು ವರ್ಷಗಳ ಹಿಂದೆ, ಇಕ್ಬಾಲ್ ಅವರ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿತು ಮತ್ತು ಅವಳು ತನ್ನ ನಿಜವಾದ ಮಗಳಲ್ಲ‌.ಅವಳು ಸಿಖ್ ಕುಟುಂಬಕ್ಕೆ ಸೇರಿದವಳು ಎಂದು ಮುಮ್ತಾಜ್‌ಗೆ ತಿಳಿಸಿದ್ದಾರೆ.

ಇಕ್ಬಾಲ್ ಸಾವಿನ ನಂತರ, ಮುಮ್ತಾಜ್ ಮತ್ತು ಆಕೆಯ ಮಗ ಶಹಬಾಜ್ ಸಾಮಾಜಿಕ ಮಾಧ್ಯಮದ ಮೂಲಕ ಆಕೆಯ ಕುಟುಂಬವನ್ನು ಹುಡುಕಲು ಪ್ರಾರಂಭಿಸಿದರು. ಅವರಿಗೆ ಮುಮ್ತಾಜ್‌ನ ನಿಜವಾದ ತಂದೆಯ ಹೆಸರು ಮತ್ತು ಪಂಜಾಬ್‌ನ (ಭಾರತ) ಪಟಿಯಾಲಾ ಜಿಲ್ಲೆಯ ಹಳ್ಳಿ (ಸಿದ್ರಾನಾ) ತಿಳಿದಿತ್ತು.

ಎರಡೂ ಕುಟುಂಬಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಸಾಧಿಸಿವೆ. ತರುವಾಯ, ಮುಮ್ತಾಜ್ ಅವರ ಸಹೋದರರಾದ ಗುರುಮೀತ್ ಸಿಂಗ್, ನರೇಂದ್ರ ಸಿಂಗ್ ಮತ್ತು ಅಮರಿಂದರ್ ಸಿಂಗ್, ಇತರ ಕುಟುಂಬ ಸದಸ್ಯರೊಂದಿಗೆ ಕರ್ತಾರ್‌ಪುರದ ಗುರುದ್ವಾರ ದರ್ಬಾರ್ ಸಾಹಿಬ್ ತಲುಪಿದರು. ಮುಮ್ತಾಜ್ ತನ್ನ ಕುಟುಂಬ ಸದಸ್ಯರೊಂದಿಗೆ ಅಲ್ಲಿಗೆ ತಲುಪಿ 75 ವರ್ಷಗಳ ನಂತರ ತನ್ನ ಕಳೆದುಹೋದ ಸಹೋದರರನ್ನು ಭೇಟಿಯಾದರು ಎಂದು ವರದಿ ತಿಳಿಸಿದೆ.

Latest Indian news

Popular Stories