ಇಂದಿನಿಂದ 75 ದಿನಗಳವರೆಗೆ ಎಲ್ಲಾ ವಯಸ್ಕರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್‌: ವಿಶೇಷ ಅಭಿಯಾನ

ನವದೆಹಲಿ: 18ರಿಂದ 59 ವರ್ಷದವರೆಗಿನ ದೇಶದ ಎಲ್ಲಾ ನಾಗರಿಕರಿಗೆ ಕೇಂದ್ರ ಸರ್ಕಾರ ಇಂದು ಜುಲೈ 15 ಶುಕ್ರವಾರದಿಂದ ಉಚಿತ ಬೂಸ್ಟರ್ ಡೋಸ್ ನೀಡಲಿದೆ. ಇದು 75 ದಿನಗಳ ವಿಶೇಷ ಕೋವಿಡ್ ಲಸಿಕೆ ಅಭಿಯಾನದ ಭಾಗವಾಗಿದೆ. 

ದೇಶಕ್ಕೆ ಸ್ವಾತಂತ್ಯ ಸಿಕ್ಕಿ 75 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವರ್ಷವಿಡೀ ಆಜಾದ್ ಕಿ ಅಮೃತ ಮಹೋತ್ಸವ ಸಂಭ್ರಮಾಚರಣೆ ಮಾಡುತ್ತಿದ್ದು ಇದರ ಅಂಗವಾಗಿ ಮುಂದಿನ 75 ದಿನಗಳವರೆಗೆ ಉಚಿತ ಬೂಸ್ಟರ್ ಡೋಸ್ ನ್ನು ನೀಡುತ್ತಿದೆ. 

ಜುಲೈ 15ರಿಂದ 75 ದಿನಗಳ ಕಾಲ ಆಜಾದ್ ಕಿ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ಉಚಿತ ಕೋವಿಡ್ ಲಸಿಕೆ ಅಭಿಯಾನ ಕೈಗೊಳ್ಳುತ್ತಿದ್ದು 18 ವರ್ಷಕ್ಕಿಂತ ಮೇಲ್ಪಟ್ಟ ದೇಶದ ಎಲ್ಲಾ ನಾಗರಿಕರಿಗೆ ಸರ್ಕಾರಿ ಕೇಂದ್ರಗಳಲ್ಲಿ ಉಚಿತ ಬೂಸ್ಟರ್ ಡೋಸ್ ನ್ನು ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಟ್ವೀಟ್ ಮೂಲಕ ತಿಳಿಸಿದ್ದಾರೆ. 

ಎಲ್ಲಾ ಅರ್ಹ ಫಲಾನುಭವಿಗಳು ಬೂಸ್ಟರ್ ಡೋಸ್ ಪಡೆದುಕೊಳ್ಳಿ ಎಂದು ಹೇಳಿರುವ ಆರೋಗ್ಯ ಸಚಿವರು, ಈ ಮೂಲಕ ಕೋವಿಡ್ ವಿರುದ್ಧದ ಭಾರತದ ಹೋರಾಟ ಮತ್ತಷ್ಟು ಬಲಿಷ್ಟವಾಗಲಿದ್ದು, ನಾಗರಿಕರ ಆರೋಗ್ಯಕ್ಕೆ ಹೆಚ್ಚು ರಕ್ಷಣೆ ಸಿಗಲಿದೆ. ಎಲ್ಲಾ ವಯಸ್ಕ ನಾಗರಿಕರು ಇದರ ಸದುಪಯೋಗಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. 

18-59 ವಯೋಮಾನದ 77 ಕೋಟಿ ಜನಸಂಖ್ಯೆ ಗುರಿಯ ಶೇಕಡಾ 1 ಕ್ಕಿಂತ ಕಡಿಮೆ ಜನರಿಗೆ ಮುನ್ನೆಚ್ಚರಿಕೆ ಕೋವಿಡ್ ಡೋಸ್ ನ್ನು ನೀಡಲಾಗಿದೆ. ಮುನ್ನೆಚ್ಚರಿಕೆಗಳ ಡೋಸ್‌ಗಳನ್ನು ಜನರು ತೆಗೆದುಕೊಳ್ಳುವ ಪ್ರಮಾಣ ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳಿಗೆ ಮುಂದಾಗಿದೆ. ಆದಾಗ್ಯೂ, 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂದಾಜು 16 ಕೋಟಿ ಅರ್ಹ ಜನಸಂಖ್ಯೆಯ ಸುಮಾರು 26 ಪ್ರತಿಶತ ಹಾಗೂ ಆರೋಗ್ಯ ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರು ಬೂಸ್ಟರ್ ಡೋಸ್ ನ್ನು ಇಲ್ಲಿಯವರೆಗೆ ಸ್ವೀಕರಿಸಿದ್ದಾರೆ.

ಕೋವಿಡ್ ಲಸಿಕೆ ಅಭಿಯಾನದ ವೇಗವನ್ನು ಹೆಚ್ಚಿಸಲು ಮತ್ತು ಬೂಸ್ಟರ್ ಡೋಸ್ ಪಡೆದುಕೊಳ್ಳುವುದನ್ನು ಉತ್ತೇಜಿಸಲು ಸರ್ಕಾರವು ಕಳೆದ ಜೂನ್ 1 ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ‘ಹರ್ ಘರ್ ದಸ್ತಕ್ ಅಭಿಯಾನ 2.0’ ನ ಎರಡನೇ ಸುತ್ತನ್ನು ಪ್ರಾರಂಭಿಸಿತ್ತು. ಈ ಕಾರ್ಯಕ್ರಮ ಮುಂದುವರಿದಿದೆ.

Latest Indian news

Popular Stories

Social Media Auto Publish Powered By : XYZScripts.com
error: Content is protected !!