ಇಂದು ರಾತ್ರಿಯೊಳಗೆ ಪುನೀತ್ ರಾಜ್ ಕುಮಾರ್ ಅಂತ್ಯ ಸಂಸ್ಕಾರ ಸಾಧ್ಯತೆ: ಸಿದ್ಧತೆಗಳ ಪರಿಶೀಲನೆ

ಬೆಂಗಳೂರು:ಶುಕ್ರವಾರ ನಿಧನ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಗಾಗಿ ಕಂಠೀರವ ಸ್ಟುಡಿಯೋದಲ್ಲಿ ಶನಿವಾರ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವರದಿಗಳ ಪ್ರಕಾರ ಇಂದು ರಾತ್ರಿಯೊಳಗೆ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಗಳಿವೆ.

ವರನಟ ಡಾ.ರಾಜ್ ಕುಮಾರ್ ಅವರ ಸಮಾಧಿ ಪಕ್ಕದಲ್ಲೆ ನಡೆಯುತ್ತಿರುವ ಸಿದ್ಧತೆಯನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬೆಳಿಗ್ಗೆ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷ ವಿಶ್ವನಾಥ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಬಿಬಿಎಂಪಿ ಅಧಿಕಾರಿಗಳು, ಇಂಜಿನಿಯರ್ ಗಳು ಉಪಸ್ಥಿತರಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

ತೆಲುಗು ಚಿತ್ರರಂಗದ ಪ್ರಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರು ಪುನೀತ್ ಅವರ ಅಂತಿಮ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಪುನೀತ್ ಅವರ ಅಂತಿಮ ದರ್ಶನ ಪಡೆದರು.

ಅಮೆರಿಕಾದಿಂದ ಆಗಮಿಸುತ್ತಿರುವ ಮಧ್ಯಾಹ್ನದ ವೇಳೆ ಪುನೀತ್ ಅವರ ಪುತ್ರಿ ಧೃತಿ ದೆಹಲಿಗೆ ತಲುಪಲಿದ್ದು, ಸಂಜೆ ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಅವರು ಅಂತಿಮ ದರ್ಶನ ಪಡೆದ ಬಳಿಕ ಸಕಲ ಸರಕಾರಿ ಗೌರವ ಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

Latest Indian news

Popular Stories

error: Content is protected !!