ಬೆಂಗಳೂರು: ಪೇಶ್ವೆ ಡಿಎನ್‌ಎ ಬಗೆಗಿನ ಜೆಡಿಎಸ್ ನಾಯಕ ಕುಮಾರಸ್ವಾಮಿಯವರ ಕುರಿತು ಬಿಜೆಪಿ ನಾಯಕರು ಟೀಕೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದು, ಈ ನಡುವಲ್ಲೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕುಮಾರಸ್ವಾಮಿಯವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಪೇಶ್ವೆಗಳ ವಂಶಾವಳಿಗೆ ಸಂಬಂಧಪಟ್ಟ ವ್ಯಕ್ತಿಯನ್ನು ಕರ್ನಾಟಕ ಬಿಜೆಪಿ ಮುಂದಿನ ಮುಖ್ಯಮಂತ್ರಿ ಮಾಡಲು ಹುನ್ನಾರ ನಡೆಸಿದೆ ಎಂಬುದು ನನ್ನ ಹೇಳಿಕೆ ಆಗಿತ್ತು. ನನ್ನ ಹೇಳಿಕೆಯಲ್ಲಿ ಗೊಂದಲ ಇಲ್ಲ, ಸ್ಪಷ್ಟತೆ ಇತ್ತು ಎಂದು ಹೇಳಿದ್ದಾರೆ.
ಕರ್ನಾಟಕದ ಮೇಲೆ, ಅದರಲ್ಲೂ ನಾವೆಲ್ಲರೂ ಶ್ರದ್ಧೆ, ಭಕ್ತಿಯಿಂದ ನಡೆದುಕೊಳ್ಳುವ ಶೃಂಗೇರಿ ಪೀಠ, ಮತ್ತೂ ಅಲ್ಲಿನ ದೇವಾಲಯಗಳ ಮೇಲೆ ಪೇಶ್ವೆಗಳಿಂದ ಪೈಶಾಚಿಕ ದಾಳಿ ನಡೆದಿತ್ತು. ಇದು ಇತಿಹಾಸ. ಈ ಇತಿಹಾಸವನ್ನು ತಿರುಚಿ ಹೇಳುವ ಅಗತ್ಯ ನನಗಿಲ್ಲ.
ನಾನು ಹೇಳಿದ್ದೇ ಒಂದು, ಕೆಲವರು ತಿರುಚಿ ಅಪಪ್ರಚಾರ ನಡೆಸುತ್ತಿರುವುದೇ ಇನ್ನೊಂದು. ಈ ಒಂದು ಇನ್ನೊಂದರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಸತ್ಯಕ್ಕೂ ಸುಳ್ಳಿಗೂ ಇರುವಷ್ಟೇ ದೂರವಿದೆ. ಪಾಪ.. ಕೆಲವರಿಗೆ ತಿರುಚುವುದೇ ಕೆಲಸ, ಅದೇ ಅವರಿಗೆ ಸರ್ವಸ್ವ. ನಾನು ಏನು ಮಾಡಲಿ? ಸತ್ಯ ಹೇಳಿದ್ದೇನೆ, ಚರ್ಚೆಯಾಗಲಿ ಎಂದು ತಿಳಿಸಿದ್ದಾರೆ.
ಶಿವಾಜಿ ಮಹಾರಾಜರು, ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ ಮತ್ತು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೇ ಬಿಡದವರು ಇವರು. ಇನ್ನು ನನ್ನನ್ನು ಬಿಟ್ಟಾರೆಯೇ? ಕೀಳು ನಿಂದನೆ, ಚಿತಾವಣೆಯಷ್ಟೇ ಇವರ ಆಯುಧಗಳು. ನಿಂದನೆ ಮತ್ತು ನಿಂದಕರ ಬಗ್ಗೆ ನಾನು ಅಂಜುವ ಪೈಕಿ ಅಲ್ಲ ಎಂದಿದ್ದಾರೆ.
ನಾನು ಎತ್ತಿದ ವಿಚಾರಕ್ಕೆ ಸಂಬಂಧವೇ ಇಲ್ಲದಂತೆ ಇವರು ಅವೇಶಭರಿತರಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ, ವಿಧಾನಸೌಧದಲ್ಲಿ ಬಿಜೆಪಿಯು ಪೇಶ್ವೆಗಳ ವಂಶಾವಳಿಯ ನಾಯಕನ ಪ್ರತಿಷ್ಠಾಪನೆ ಮಾಡಲು ಹೊರಟಿರುವ ನನ್ನ ಪ್ರಶ್ನೆಗೆ ಉತ್ತರ ಕೊಡುವ ದಮ್ಮು ತಾಕತ್ತು ತೋರಿಸುತ್ತಿಲ್ಲ, ಯಾಕೆ? ಇಂಥ ವಿಕೃತಿಗಳಿಗೆ ನಾನು ಸೊಪ್ಪು ಹಾಕುವುದಿಲ್ಲ. ಯಾರೋ ಮಾಡಿದ ಆದೇಶ, ಕಟ್ಟಪ್ಪಣೆಗೆ ಅಂಜಿ ನನ್ನ ಬಗ್ಗೆ ಬಿಜೆಪಿ ನಾಯಕರು ಸರಣಿ ಹೇಳಿಕೆ ನೀಡಬಹುದು. ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿಸಬಹುದು. ಆದರೆ, ಅವರೆಲ್ಲ ತಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನೆ ಮಾಡಿಕೊಳ್ಳಲಿ. ಪೇಶ್ವೆ ವಂಶಾವಳಿ ನಾಯಕನ ಸರಣಿ ಹುನ್ನಾರಗಳ ಬಗ್ಗೆ ಮಾತನಾಡುವ ಧೈರ್ಯ ಅವರು ತೋರುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ನನಗೆ ಸೋಲುವ ಭಯವಂತೆ, ಹತಾಶೆಯಂತೆ ಎಂದು ಬೊಗಳೆ ಬಿಟ್ಟುಕೊಂಡು ಕೇಕೆ ಹಾಕಿದರೆ ಜನ ನಂಬುವುದಿಲ್ಲ, ಅವರಿಗೂ ಗರ್ಭಗುಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಚೆನ್ನಾಗಿ ಗೊತ್ತು. ಸತ್ಯ ಸಾಯುವುದೂ ಇಲ್ಲ. ಅಲ್ಲವೇ? ಜಗಜ್ಯೋತಿ ಬಸವೇಶ್ವರರು, ಗೌತಮ ಬುದ್ಧ, ಮಹಾತ್ಮ ಗಾಂಧೀಜಿ, ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದನ್ನೇ ನಾನು ಹೇಳಿದ್ದೇನೆ. ಇನ್ನು, ಬ್ರಾಹ್ಮಣ ಸಮೂಹವನ್ನು ನಿಂದಿಸುವ ಪ್ರಶ್ನೆ ಎಲ್ಲಿ? ನಾನು ನಿಂದಿಸಿಲ್ಲ, ನಿಂದಿಸುವುದೂ ಇಲ್ಲ. ಮತ್ತೆ ಮತ್ತೆ ಸ್ಪಷ್ಟನೆ ಅನಗತ್ಯ ಎಂದು ಸ್ಪಷ್ಟಪಡಿಸಿದ್ದಾರೆ.