ಉಜಿರೆ ಗ್ರಾ.ಪಂ ಅಧ್ಯಕ್ಷೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಪ್ರಕರಣ; ಮಹಿಳೆ ಮೃತ್ಯು – ಐವರಿಗೆ ಗಾಯ

ಬೆಳ್ತಂಗಡಿ, ಆ.10: ಕೊಟ್ಟಿಗೆಹಾರದಿಂದ ಉಜಿರೆಗೆ ಹೋಗುತ್ತಿದ್ದ ಕಾರೊಂದು ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಆಳವಾದ ಕಂದಕಕ್ಕೆ ಉರುಳಿ ಓರ್ವ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಏಪ್ರಿಲ್ 10 ರ ಭಾನುವಾರ ರಾತ್ರಿ ಅಪಘಾತ ಸಂಭವಿಸಿದೆ.

ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಅವರ ಕುಟುಂಬದ ಸದಸ್ಯರೇ ಕಾರಿನಲ್ಲಿದ್ದವರು. ಶೃಂಗೇರಿ ಕೊಪ್ಪದಿಂದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದರು.

ಪುಷ್ಪಾವತಿ ಅವರ ಸಂಬಂಧಿ ಸರೋಜಿನಿ ಶೆಟ್ಟಿ ಮೃತಪಟ್ಟರೆ, ಪುಷ್ಪಾವತಿ ಶೆಟ್ಟಿ, ಅವರ ಮಗಳು ಪೂರ್ಣಿಮಾ ಶೆಟ್ಟಿ, ಮೊಮ್ಮಗ ಸಮೃದ್ಧ್, ಸಾಕ್ಷಿ ಮತ್ತು ಕಾರು ಚಾಲಕ ಅರುಣ್ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆ, ಎಸ್‌ಡಿಎಂ ಆಸ್ಪತ್ರೆ ಉಜಿರೆ ಮತ್ತು ಬೆನಕ ಆಸ್ಪತ್ರೆಗೆ ರವಾನಿಸಲಾಗಿದೆ. ಸರೋಜಿನಿ ಶೆಟ್ಟಿ ಮತ್ತು ಪೂರ್ಣಿಮಾ ಶೆಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಆದರೆ, ಸರೋಜಿನಿ ಶೆಟ್ಟಿ ಮಂಗಳೂರಿಗೆ ತೆರಳುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಅಪಘಾತದ ಸುದ್ದಿ ತಿಳಿದ ಎಸ್‌ಡಿಪಿಐ ಚಾರ್ಮಾಡಿ ಗ್ರಾಮ ಸಮಿತಿ ಅಧ್ಯಕ್ಷ ಆಪತ್ಬಾಂಧವ ಸಿನಾನ್ ಚಾರ್ಮಾಡಿ ಗಾಯಾಳುಗಳನ್ನು ಕೊರಕಲು ತೋಡಿನಿಂದ ಕರೆತರುವ ಕಾರ್ಯದಲ್ಲಿ ತೊಡಗಿದರು. ಮನೋಜ್ ಬೀಟಿಗೆ ಹಾಗೂ ಸ್ಥಳೀಯರು ಸಿನಾನ್ ಗೆ ಸಹಕರಿಸಿದರು. ಕಾರು ಚಾಲಕ ಅರುಣ್ ಕೂಡ ಸಾಕಷ್ಟು ಪ್ರಯತ್ನ ಪಟ್ಟರು.

ಅಪಘಾತದಲ್ಲಿ ಪುಷ್ಪಾವತಿ ಅವರ ಕೈ ಮೂಳೆ ಮುರಿತವಾಗಿದೆ. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ. ಮಗಳು ಪೂರ್ಣಿಮಾ ಅವರ ತಲೆಗೆ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರೋಜಿನಿ ಶೆಟ್ಟಿ ವಿಧವೆ. ಅವರು ಒಬ್ಬ ಪುತ್ರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

Latest Indian news

Popular Stories