ಉಡುಪಿ: ಒಂದೂವರೆ ವರ್ಷಗಳ ಹಿಂದೆ ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ದಫನ ಮಾಡಲಾದ ಪಂಜಾಬ್ ಮೂಲದ ವ್ಯಕ್ತಿಯೊಬ್ಬರ ಮೃತದೇಹವನ್ನು ಹೆಚ್ಚಿನ ತನಿಖೆಗಾಗಿ ಪಂಜಾಬ್ ಪೊಲೀಸರ ಸಮ್ಮುಖದಲ್ಲಿ ಶನಿವಾರ ಹೊರತೆಗೆಯಲಾಗಿದೆ.
ಪಂಜಾಬ್‌ನಲ್ಲಿ ನಾಪತ್ತೆಯಾದ ಈ ವ್ಯಕ್ತಿ ಒಂದೂವರೆ ವರ್ಷಗಳ ಹಿಂದೆ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತಪಟ್ಟಿದ್ದರು. ಆದರೆ ವಾರಸುದಾರರು ಸಂಪರ್ಕಿಸದ ಕಾರಣಕ್ಕಾಗಿ ಅಜ್ಜರಕಾಡು ಶವಾಗಾರದಲ್ಲಿದ್ದ ಈ ಮೃತದೇಹವನ್ನು ಬೀಡಿನಗುಡ್ಡೆ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ಮಾಡಿ ದಫನ ಮಾಡಲಾಗಿತ್ತು.
ಈ ಕುರಿತು ಮಾಹಿತಿ ಪಡೆದುಕೊಂಡ ಪಂಜಾಬ್ ಪೊಲೀಸರು ಮಲ್ಪೆಗೆ ಆಗಮಿಸಿದ್ದು, ಹೆಚ್ಚಿನ ತನಿಖೆಗಾಗಿ ಮೃತದೇಹವನ್ನು ಹೊರತೆಗೆಯುವಂತೆ ಸಂಬಂಧಪಟ್ಟವರಿಗೆ ಲಿಖಿತವಾಗಿ ಮನವಿ ಮಾಡಿಕೊಂಡಿದ್ದರು.
ಉಡುಪಿ ತಹಶೀಲ್ದಾರ್ ಅರ್ಚನಾ ಭಟ್, ಮಲ್ಪೆ ಎಸ್‌ಐ ಶಕ್ತಿವೇಲು ಹಾಗೂ ಪಂಜಾಬ್ ಪೊಲೀಸರ ಸಮ್ಮುಖದಲ್ಲಿ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ.
ಮೂಲಗಳ ಪ್ರಕಾರ ಆತ ಪಂಜಾಬ್‌ನಲ್ಲಿ ಕೊಲೆ ಮಾಡಿದ್ದ ಎನ್ನಲಾಗಿದೆ. ಈ ಬಗ್ಗೆ ತನಿಖೆಗಾಗಿ ಪೊಲೀಸರು ಮಾಹಿತಿ ಕಲೆಹಾಕುವ ಸಂದರ್ಭ ಸಾಕ್ಷ್ಯಾಧಾರಗಳಿಗೆ ಈ ರೀತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಫನ ಸ್ಥಳ ಗುರುತಿಸಲು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಸಹಕರಿಸಿದೆ.