ಉಡುಪಿ, ಜ.6: ಮೀನುಗಾರಿಕಾ ಬೋಟ್’ವೊಂದು ಸಮುದ್ರದ ಮಧ್ಯದಲ್ಲಿ ಬಂಡೆಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಬಡನಿಡಿಯೂರಿನ ಭಾಸ್ಕರ್ ಎಂ ಪುತ್ರನ್ ಎಂಬುವವರ ಒಡೆತನದ ಸ್ವರ್ಣಗೌರಿ ದೋಣಿ ಡಿ.30ರಂದು ರಾತ್ರಿ ಮಲ್ಪೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಜ.3ರಂದು ಕಾಪುದಿಂದ ಎಂಟು ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಬಂಡೆಗೆ ತಾಗಿ ನೀರು ರಭಸವಾಗಿ ಹರಿಯಲಾರಂಭಿಸಿತ್ತು. ಹಲಗೆ ಹಾನಿಗೊಳಗಾದ ಕಾರಣ ದೋಣಿಯೊಳಗೆ ನೀರು ಬಂದಿದೆ.
ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವರುಣ ದೋಣಿಗೆ ಸ್ವರ್ಣಗೌರಿ ದೋಣಿಯ ತಾಂಡೇಲಾ ಮಾಹಿತಿ ರವಾನಿಸಿದರು. ವರುಣ ದೋಣಿಯಲ್ಲಿದ್ದ ಮೀನುಗಾರರು ಸ್ವರ್ಣಗೌರಿ ದೋಣಿಯಲ್ಲಿದ್ದ ಸಿಬ್ಬಂದಿಯ ರಕ್ಷಣೆಗೆ ಧಾವಿಸಿ ಎಲ್ಲರನ್ನೂ ರಕ್ಷಿಸಿದರು. ಆದರೆ, ಬಂಡೆಗೆ ಡಿಕ್ಕಿ ಹೊಡೆದ ದೋಣಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ.
ಆರು ಸೆಟ್ ಬಲೆ, ಹಗ್ಗ, ಡ್ರಮ್ ವಿಂಚ್, ಇಂಜಿನ್ ಹಾಗೂ 2000 ಲೀಟರ್ ಡೀಸೆಲ್ ಸಮುದ್ರದಲ್ಲಿ ಕೊಚ್ಚಿ ಹೋಗಿವೆ. 30 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.