ಉಡುಪಿ: ”ಯಕ್ಷಗಾನ ಕಲೆ ಸಮಾಜವನ್ನು ಒಟ್ಟುಗೂಡಿಸುವ ಅಂಟು. ಇದು ವಿಭಜಿಸುವುದಿಲ್ಲ. ಡಾ.ಶಿವರಾಮ ಕಾರಂತರ ಹೆಸರು ಉಡುಪಿಯಲ್ಲಿ ಸೇರಿಕೊಂಡಿದೆ, ಇದೊಂದು ದೊಡ್ಡ ವೃಕ್ಷ. ನಾನು ಕೇವಲ ವಸಂತಕಾಲದಲ್ಲಿ ಅರಳಿ ನಿಲ್ಲುವ ಚಿಗುರು” ಎಂದು ಲೇಖಕ ರೋಹಿತ್ ಚಕ್ರತೀರ್ಥ ಅವರು ವಿರೋಧ ನಡುವೆಯು ಸಮಗ್ರ ಯಕ್ಷಗಾನ ಸಮ್ಮೇಳನದ ವೇದಿಕೆಯಲ್ಲಿ ಮಾತನಾಡಿದರು.
“ಕಲೆಯ ಮೇಲೆ ನಿರಂತರ ದಾಳಿ ನಡೆದಿದೆ, ಒಡೆಯುವ ಹುನ್ನಾರ ನಡೆಯುತ್ತಿದೆ. ಭಾರತ ಮಾತೆಗೆ ಮೂವರು ಮಕ್ಕಳು ಮೊದಲನೆಯದ್ದು ವೇದ ವೇದಾಂತ, ಎರಡನೆಯದು ಮಹಾಕಾವ್ಯಗಳು ಮತ್ತು ಮೂರನೆಯದ್ದು ಪುರಾಣ ಪ್ರಪಂಚ. ದೊಡ್ಡ ರೀತಿಯಲ್ಲಿ ಈ ದೇಶದಲ್ಲಿ ಪುರಾಣವನ್ನು ಸುಳ್ಳು ಮಾಡಲು ದೊಡ್ಡ ಮಟ್ಟದ ಹುನ್ನಾರ ನಡೆಯುತ್ತಿದೆ. ಪುರಾಣವನ್ನು ಶುದ್ಧ ರೀತಿಯಲ್ಲಿ ಉಳಿಸಿಕೊಂಡು ಬಂದ ಒಂದು ಮಾಧ್ಯಮವಿದ್ದರೆ ಅದು ಯಕ್ಷಗಾನ. ಪುರಾಣ ಉಳಿಸಿಕೊಳ್ಳಬೇಕಾದರೆ ಯಕ್ಷಗಾನದಲ್ಲಿ ಪೌರಾಣಿಕ ಕಥೆಗಳು ಉಳಿದುಕೊಳ್ಳಬೇಕಾಗಿದೆ” ಎಂದರು.
”ಬುದ್ಧಿಜೀವಿಗಳು ಪುರಾಣವನ್ನು ಸುಳ್ಳು ಎಂದು ನಿರೂಪಿಸಲು ಭಾರಿ ಪ್ರಯತ್ನ ನಡೆಸುತ್ತಿದ್ದಾರೆ . ಆದರೆ ಅವರಿಗೆ ಅದು ಸಾಧ್ಯವಿಲ್ಲ.ದೊಡ್ಡ ವ್ಯವಸ್ಥೆಯ ಜೊತೆಗೆ ಇದ್ದೇನೆ, ಅದನ್ನು ಪ್ರಶ್ನಿಸಬೇಕಾದರೆ ಎಷ್ಟು ವರ್ಷದಿಂದ ಅದು ನಡೆದು ಬಂದಿದೆ ಎನ್ನುವ ಎಚ್ಚರಿಕೆ ಬೇಕು” ಎಂದರು.
”ಈಗ ಪ್ರಸಂಗ ಬರೆಯಲು ಪುರಾಣ ಬೇಕಾಗಿಲ್ಲ, ಕಥೆ ಕಾದಂಬರಿ, ಸಿನಿಮಾ ನೋಡಿ ಆಧುನಿಕ ಜೀವನ ಎಂಕ, ನಾಣಿ ಶೀನ ಏನು ಬೇಕಾದರೂ ಬರೆಯಬಹುದು. ವಿದ್ವಾಂಸರು ಇದನ್ನು ಬೆಂಬಲಿಸಿದಾಗ ದೊಡ್ಡ ಪರಿಣಾಮ ಆಗುತ್ತದೆ” ಎಂದು ಬೇಸರ ಹೊರ ಹಾಕಿದರು.
“ಯಕ್ಷಗಾನವನ್ನು ಅಬ್ರಾಹ್ಮಣರು ನಡೆಸುತ್ತಿದ್ದರು ಎನ್ನುವ ಮಾತು ಇದೆ, ಒಳ್ಳೆಯ ಕಥೆ, ಸಾಹಿತ್ಯಕ್ಕಾಗಿ ಬಳಿಕ ಬ್ರಾಹ್ಮಣರು ಸೇರಿಕೊಂಡರು ಅನ್ನುತ್ತಾರೆ, ಇನ್ನೊಂದು ಕಡೆ ಇದು ಬ್ರಾಹ್ಮಣರ ಕಲೆ ಆನಂತರ ಇತರರು ಸೇರಿಕೊಂಡರು ಎನ್ನುತ್ತಾರೆ. ಆದರೆ ಶ್ರೇಣೀಕೃತ ವ್ಯವಸ್ಥೆ ಹುಟ್ಟುವ ಮೊದಲೇ ಯಕ್ಷಗಾನ ಹುಟ್ಟಿದ್ದು, ಇದು ಯಾವುದೇ ಜಾತಿ ಪಂಥಕ್ಕೆ ಸೇರಿದ್ದಲ್ಲ” ಎಂದರು.
”ನಾಟ್ಯ ನಟ ಧಾತುವಿನಿಂದ ಬಂದದ್ದು ನಾಟ್ಯ ಮತ್ತು ಆಟ ಶುದ್ಧವಾದ ಮಾರ್ಗದಲ್ಲಿ ನಾವು ನಾಟ್ಯ ನಾಟಕ ಗದ್ಯವನ್ನು ಇಟ್ಟುಕೊಂಡದ್ದು. ಪದ್ಯ ಮತ್ತು ಗದ್ಯಗಳ ಸಂಗಮ ಯಕ್ಷಗಾನ. ಒಂದು ಕಡೆ ದೇಸಿ, ಇನ್ನೊಂದು ಕಡೆ ಮಾರ್ಗ.ಲಿಖಿತ ಮತ್ತು ಆಶು ರೂಪವು ಹೌದು. ಒಂದೆಡೆ ಸಂಸ್ಕೃತ ಇನ್ನೊಂದೆಡೆ ನಮ್ಮ ಸ್ಥಳೀಯ ಭಾಷೆ. ಪತಂಜಲಿ ಮಹಾ ಭಾಷೆಯಲ್ಲಿ ಕಂಸವಧೆ ಪ್ರಸಂಗ ಬರುತ್ತದೆ ಯಕ್ಷಗಾನದಲ್ಲೂ ಅದು ಜನಪ್ರಿಯ ಪ್ರಸಂಗ” ಎಂದರು.
”ಸೂತ್ರಧಾರ ಅಥವಾ ಭಾಗವತ ಆ ಶಬ್ದಗಳೇ ಪ್ರಾಚೀನತೆ ಹೊಂದಿದ್ದು, ವೇದಗಳ ಕಾಲಕ್ಕೆ ಹೋಗುತ್ತದೆ, ಸಭಾ ಲಕ್ಷಣ, ದೇವತಾ ಸ್ತುತಿ ಸೇರಿ ಎಲ್ಲವೂ ಭಾರತ ಮುನಿ ಹೇಳಿರುವುದಕ್ಕೆ ಸರಿಯಾಗಿ ಕೂಡಿಕೊಳ್ಳುತ್ತದೆ. ಆಧುನಿಕ ರಂಗಭೂಮಿಯಲ್ಲಿ ಸೂತ್ರಧಾರ ಇರುತ್ತಾನೆ, ಅಲ್ಲಿ ಆರಂಭದಲ್ಲಿ ಮಾತ್ರ ಸೂತ್ರಧಾರ ಕಾಣಿಸಿಕೊಂಡು ನಿರ್ಗಮಿಸಿದ ಮೇಲೆ ನಾಟಕಕ್ಕೂ ಸೂತ್ರಧಾರನಿಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಯಕ್ಷಗಾನದಲ್ಲಿ ಭಾಗವತ ಪ್ರಸಂಗದ ಉದ್ದಕ್ಕೂ ಇರುತ್ತಾನೆ. ಭಾರತಮುನಿಯ ಚೌಕಟ್ಟು ಸಮಗ್ರವಾಗಿ ಯಕ್ಷಗಾನದಲ್ಲಿ ಕಾಣಬಹುದು” ಎಂದರು.
”ಪಾರಿಭಾಷಿಕಗಳನ್ನು ಅದೇ ಅರ್ಥದಲ್ಲಿ ಕಾಣಬಹುದು, ಮೃದಂಗ ಮತ್ತು ಚಂಡೆ ಚರ್ಮವಾದ್ಯಗಳು, ಜಾಗಟೆ, ತಾಳ, ಲಯ ಬಹಳ ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ಯಕ್ಷಗಾನ ಬಹಳ ಪ್ರಾಚೀನ ಕಲೆ ಎನ್ನುವುದು ಸರ್ವಥಾ ಸಿದ್ದಿ” ಎಂದರು.
”ಯಕ್ಷಗಾನ ಬುದ್ದಿ ಮತ್ತು ಭಾವನೆಗಳನ್ನು ಪ್ರಚೋದಿಸುವ ಕಲೆ , ಪಂಡಿತ ಮತ್ತು ಪಾಮರರು ಯಕ್ಷಗಾನವನ್ನು ನೋಡುವ ರೀತಿಯೇ ಬೇರೆ. ಎಲ್ಲ ವರ್ಗದವರಿಗೂ ಅತ್ಯಂತ ಪ್ರಿಯವಾದುದ್ದಾಗಿದೆ” ಎಂದರು.
”ನಾಗರಿಕತೆ ಹುಟ್ಟುತ್ತಿರುವ ಕಾಲದಲ್ಲೇ ಯಕ್ಷಗಾನ ಹುಟ್ಟಿಕೊಂಡಿದೆ. ಇದು ಶುದ್ಧವಾದ ಭಾರತೀಯ ಕಲೆ, ಪ್ರಪಂಚದಲ್ಲಿ ಅನೇಕ ನಾಗರಿಕತೆ ನಶಿಸಿ ಹೋದವು. ನಾವು ಹೆಚ್ಚಿನದವುಗಳನ್ನು ಮ್ಯೂಸಿಯಂ ಗಳಲ್ಲಿ ನೋಡುತ್ತೇವೆ. ಭಾರತದಲ್ಲಿ ಸಾಂಸ್ಕೃತಿಕವಾಗಿ ಜೀವಂತವಾಗಿರುವ ಭಾಷೆ ಯಕ್ಷಗಾನ” ಎಂದರು.
”ಎಷ್ಟೋ ಮಂದಿ, ಎರಡು ವೇಷ ಬರುತ್ತದೆ, ಕುಣಿಯುತ್ತಾರೆ, ಭಾಗವತಿಕೆ ಮಾಡುತ್ತಾರೆ ಅನ್ನುವುದು ಯಕ್ಷಗಾನ ಅಲ್ಲ, ಸಾವಿರಾರು ವರ್ಷಗಳಿಂದ ಇದು ಬೆಳೆದುಕೊಂಡು ಬಂದಿದೆ ಎನ್ನುವ ಎಚ್ಚರ ಮತ್ತು ಹೆಮ್ಮೆ ಎರಡೂ ಬೇಕು. ಕಲೆಯನ್ನು ಬದಲಿಸಲು ಎಚ್ಚರದಿಂದ ಹೆಜ್ಜೆ ಇಡಬೇಕು. ನಾಗರಿಕತೆಯ ಜೊತೆಗೆ ಯಕ್ಷಗಾನ ಬೆಳೆದುಬಂದಿದೆ” ಎಂದರು.