ಉತ್ತರಾಖಂಡ್ನಲ್ಲಿ ದಿಢೀರಾಗಿ ಭೂಮಿ ಬಾಯ್ತೆರೆದಿದ್ದು ಜನರು ತತ್ತರಿಸಿದ್ದಾರೆ. ರಸ್ತೆ, ಹೆದ್ದಾರಿ, ನೂರಾರು ಮನೆಗಳು ಬಿರುಕು ಬಿಟ್ಟಿದ್ದು ಪರಿಸ್ಥಿತಿ ಗಂಭೀರವಾಗಿದ್ದನ್ನು ತಿಳಿದ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿದ್ದಾರೆ.
ನವದೆಹಲಿ, ಜ.9 : ಉತ್ತರಾಖಂಡ್ನಲ್ಲಿ ದಿಢೀರಾಗಿ ಭೂಮಿ ಬಾಯ್ತೆರೆದಿದ್ದು ಜನರು ತತ್ತರಿಸಿದ್ದಾರೆ. ರಸ್ತೆ, ಹೆದ್ದಾರಿ, ನೂರಾರು ಮನೆಗಳು ಬಿರುಕು ಬಿಟ್ಟಿದ್ದು ಪರಿಸ್ಥಿತಿ ಗಂಭೀರವಾಗಿದ್ದನ್ನು ತಿಳಿದ ಪ್ರಧಾನಿ ಮೋದಿ ಮಹತ್ವದ ಸಭೆ ನಡೆಸಿದ್ದಾರೆ.
ಭೂಕುಸಿತದಿಂದಾಗಿ ಚಮೋಲಿ ಜಿಲ್ಲೆಯ ಜೋಷಿಮಠ ಸ್ಥಿತಿ ಅಯೋಮಯ ಎನ್ನುವಂತಾಗಿದೆ. ಸುಮಾರು 550ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿದ್ದು 3 ಸಾವಿರ ಕುಟುಂಬಗಳು ಆತಂಕದಲ್ಲಿವೆ. ಜನರನ್ನು ರಕ್ಷಣಾ ದೃಷ್ಟಿಯಿಂದ ಬೇರೆಡೆ ಸ್ಥಳಾಂತರಿಸಲಾಗಿದೆ. ಮನೆ ಮಾತ್ರವಲ್ಲದೆ ರಸ್ತೆ, ಕೃಷಿ ಭೂಮಿಯಲ್ಲಿ ಭಾರೀ ಬಿರುಕು ಬಿದ್ದಿವೆ. ಬಿರುಕು ಬಿಟ್ಟ ಕೆಲವೆಡೆ ಭೂಮಿಯಿಂದ ನೀರು ಉಕ್ಕಿ ಬರುತ್ತಿದೆ. ಇದರಿಂದಾಗಿ ಯಾವುದೇ ಸಂದರ್ಭದಲ್ಲಿ ಈ ಪ್ರದೇಶ ಕುಸಿದು ಹೋಗುವ ಆತಂಕ ವ್ಯಕ್ತವಾಗಿದೆ.
ಕೇದಾರನಾಥ, ಬದರಿನಾಥ ರೀತಿಯಲ್ಲೇ ಲಕ್ಷಾಂತರ ಭಕ್ತರು ಭೇಟಿ ನೀಡುವ ಪಟ್ಟಣಗಳಲ್ಲಿ ಒಂದು ಜೋಶಿಮಠ. ಬಹುತೇಕ ಕಟ್ಟಡಗಳು, ರಸ್ತೆಗಳು ಬಿರುಕು ಬಿಟ್ಟಿದ್ದು ಹಲವಾರು ಮನೆ, ದೇವಸ್ಥಾನಗಳು ಉರುಳಿ ಬಿದ್ದಿವೆ. ಹೀಗಾಗಿ ಜೋಶಿಮಠ ಪಟ್ಟಣವನ್ನು ಭೂಕುಸಿತ ವಲಯ ಎಂದು ಘೋಷಣೆ ಮಾಡಲಾಗಿದೆ. ಈಗಾಗಲೇ ಹಾನಿಗೊಳಗಾದ ಮನೆಗಳಲ್ಲಿ ಸಿಲುಕಿದ್ದ 60 ಕ್ಕೂ ಹೆಚ್ಚು ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಹಿಮಾಲಯ ಪಟ್ಟಣದ ನಾಲ್ಕೈದು ಸ್ಥಳಗಳಲ್ಲಿ ಪರಿಹಾರ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಮಳೆ ಇಲ್ಲದಿದ್ದರೂ, ದಿಢೀರ್ ಭೂಕುಸಿತ ಆಗಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.