ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಕಾಲೇಜು ಪರೀಕ್ಷೆ ಮುಗಿಸಿ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರನ್ನು ಮೋಟಾರ್ ಸೈಕಲ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಸ್ಥಳೀಯ ಪೊಲೀಸ್ ಠಾಣೆಯಿಂದ ಕೇವಲ 200 ಮೀಟರ್ ದೂರದಲ್ಲಿ ಜನನಿಬಿಡ ರಸ್ತೆಯನ್ನು ದಾಟಿದ ದುಷ್ಕರ್ಮಿಗಳು ಗನ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
21 ವರ್ಷದ ಬಿಎ ವಿದ್ಯಾರ್ಥಿನಿ ರೋಶ್ನಿ ಅಹಿರ್ವಾರ್, ಬೆಳಿಗ್ಗೆ 11 ಗಂಟೆಗೆ ಪರೀಕ್ಷೆ ಮುಗಿಸಿ ಐಟ್ನಲ್ಲಿರುವ ರಾಮ್ ಲಖನ್ ಪಟೇಲ್ ಮಹಾವಿದ್ಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬಜಾಜ್ ಪಲ್ಸರ್ ಮೋಟಾರ್ಸೈಕಲ್ನಲ್ಲಿ ಇಬ್ಬರು ವ್ಯಕ್ತಿಗಳು ಕಂಟ್ರಿಮೇಡ್ ಪಿಸ್ತೂಲ್ನೊಂದಿಗೆ ಆಕೆಯ ಬಳಿಗೆ ಬಂದರು. ಅವರಲ್ಲಿ ಒಬ್ಬರು ಆಕೆಯ ತಲೆಗೆ ಗುಂಡು ಹಾರಿಸಿದ್ದು, ರೋಶನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ಜನರನ್ನು ಹಿಡಿಯಲು ಧಾವಿಸಿದರು, ಆದರೆ ಅವರು ಆಯುಧವನ್ನು ಎಸೆದು ಓಡಿಹೋಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ದುಷ್ಕರ್ಮಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಇತ್ತೀಚೆಗೆ ಪೊಲೀಸ್ ಕಸ್ಟಡಿಯಲ್ಲಿದ್ದ ಗ್ಯಾಂಗ್ ಸ್ಟಾರ್ ಅತೀಕ್ ನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಇದರ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿತ್ತು.