ಉತ್ತರ ಪ್ರದೇಶ ಚುನಾವಣೆ 2022: ಮೊದಲ ಮೂರು ಹಂತಕ್ಕೆ ಬಿಜೆಪಿ ಅಭ್ಯರ್ಥಿಗಳು ಫೈನಲ್!

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ), ಬುಧವಾರ ನಡೆದ ತನ್ನ ಕೋರ್ ಕಮಿಟಿ ಸಭೆಯಲ್ಲಿ, ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮೊದಲ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವ 172 ಸ್ಥಾನಗಳ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ.

ಮೂಲಗಳ ಪ್ರಕಾರ, ರಾಷ್ಟ್ರ ರಾಜಧಾನಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ, 300 ಕ್ಕೂ ಹೆಚ್ಚು ಸ್ಥಾನಗಳಿಗೆ ಚರ್ಚೆ ನಡೆಸಲಾಯಿತು.ಆದರೆ ಮೊದಲ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವ 172 ಸ್ಥಾನಗಳಿಗೆ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಇದೀಗ, ಗುರುವಾರ ನಡೆಯಲಿರುವ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯಲ್ಲಿ ಈ ಹೆಸರುಗಳನ್ನು ಮುಂದಿಡಲಾಗುವುದು, ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಭಾಗವಹಿಸಲಿದ್ದಾರೆ.

ಸಿಇಸಿ ಅಭ್ಯರ್ಥಿಗಳ ಅಂತಿಮ ಪಟ್ಟಿಗೆ ಮುದ್ರೆ ಒತ್ತಿದ ನಂತರ, ಮುಂದಿನ ದಿನಗಳಲ್ಲಿ ಬಿಜೆಪಿ ಈ 172 ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಪ್ರಕಟಿಸಲಿದೆ.

ಮೂರು ದಿನಗಳ ಸಭೆಯ ಎರಡನೇ ದಿನದಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬಿಜೆಪಿ ಯುಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು.

ಬುಧವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆ ಇಂದು ಮಧ್ಯರಾತ್ರಿ 1.35ರವರೆಗೆ ನಡೆಯಿತು. ಮೊನ್ನೆ ಮಂಗಳವಾರ 10 ಗಂಟೆಗೂ ಹೆಚ್ಚು ಕಾಲ ಸಭೆ ನಡೆಯಿತು.

ಚುನಾವಣಾ ಆಯೋಗದ ಪ್ರಕಾರ ಮೊದಲ ಹಂತದಲ್ಲಿ 58 ಸ್ಥಾನಗಳಿಗೆ, ಎರಡನೇ ಹಂತದಲ್ಲಿ 55 ಸ್ಥಾನಗಳಿಗೆ ಮತ್ತು ಮೂರನೇ ಹಂತದಲ್ಲಿ 59 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಮೂಲಗಳ ಪ್ರಕಾರ, ಬುಧವಾರ ನಡೆದ ಸಭೆಯಲ್ಲಿ, ಅಯೋಧ್ಯೆ ಸೇರಿದಂತೆ ಕ್ಷೇತ್ರಗಳ ಕುರಿತು ಚರ್ಚೆಗಳು ನಡೆದಿವೆ. ಅಲ್ಲಿ ಪಕ್ಷವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಣಕ್ಕಿಳಿಸಬಹುದು ಆದರೆ ಅಂತಿಮ ನಿರ್ಧಾರವನ್ನು ಸಿಇಸಿ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Latest Indian news

Popular Stories

error: Content is protected !!