ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಸೆಯುವ ಎಕ್ಸ್ ಪ್ರೆಸ್ ದಶಪಥ ರಸ್ತೆಯಲ್ಲಿ ಕಳೆದ ಆರು ತಿಂಗಳಲ್ಲಿ 84ಕ್ಕೂ ಹೆಚ್ಚು ಮಂದಿ ಅಪಘಾತದಿಂದ ಮೃತಪಟ್ಟಿದ್ದಾರೆ.
ಉದ್ಘಾಟನೆಗೆ ಮುನ್ನವೇ ಇಷ್ಟು ಮಂದಿ ಪ್ರಾಣ ಕಳೆದುಕೊಂಡಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಘಟ್ಟದ ತನಕ ಮಾತ್ರ ಕಾಮಗಾರಿ ಪೂರ್ತಿಗೊಂಡಿದೆ. ಹೀಗಿದ್ದರೂ ಅತೀ ವೇಗವಾಗಿ ಗುರಿ ತಲುಪಬೇಕು ಎಂಬ ಧಾವಂತವೇ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ.
ಸರಿಯಾದ ಸೂಚನಾ ಫಲಕ ಇಲ್ಲದಿರುವುದು ಚಾಲಕರಿಗೆ ಮಾಹಿತಿ ಕೊರತೆ ಕೂಡ ದುರಂತಕ್ಕೆ ದಾರಿ ಮಾಡಿಕೊಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಕಳೆದ ಆರು ತಿಂಗಳ ಅವಧಿಯಲ್ಲಿ 225 ಅಪಘಾತ ಈ ಹೆದ್ದಾರಿಯಲ್ಲಿ ಸಂಭವಿಸಿದೆ. 43 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.