ಉದ್ಯೋಗ ಖಾತರಿ ಯೋಜನೆ ಬಡವರಿಗೆ ಅನೂಕೂಲ: ರಾಹುಲ್ ಶಿಂಧೆ

ವಿಜಯಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಜಾರಿಗೆ ಬಂದು 17 ವರ್ಷಗಳು ಉರುಳಿದವು. ಈ ಯೋಜನೆಯು ರೈತರಿಗೆ ಹಾಗೂ ಬಡವರಿಗೆ ಅನುಕೂಲವಾಗಿದೆ ಆದ್ದರಿಂದ ಎಲ್ಲರೂ ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.
ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ “ನರೇಗಾ ದಿವಸ” ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ನರೇಗಾ ಕೂಲಿಕಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಯೋಜನೆಯಡಿ ನರೇಗಾ ಕೂಲಿಕಾರರಿಗೆ ಇ-ಶ್ರಮ್ ಪೋರ್ಟಲ್ ನಲ್ಲಿ ನೊಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ನಿಮಗೆ ಆಸ್ಪತ್ರೆ ಖರ್ಚು-ವೆಚ್ಚಗಳಿಗೆ ಸಹಾಯಕವಾಗುತ್ತದೆ. ಮುಖ್ಯವಾಗಿ ನರೇಗಾ ಯೋಜನೆಯಡಿ ಎಲ್ಲ ಕೂಲಿಕಾರರು ಭಾಗವಹಿಸಿ ಸಾರ್ವಜನಿಕ ಆಸ್ತಿಗಳನ್ನು ಸೃಜನೆ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಕೂಲಿ ರೂ.309/- ಗಳನ್ನು ಒದಗಿಸಲಾಗುತ್ತಿದೆ. ಪ್ರತಿ ಕುಟುಂಬಕ್ಕೆ ಒಂದು ವರ್ಷದಲ್ಲಿ 100 ದಿನಗಳಂತೆ ಉದ್ಯೋಗ ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಜನರು ಉದ್ಯೋಗವನ್ನರಸಿ ಬೇರೆ ರಾಜ್ಯ/ಜಿಲ್ಲೆ/ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ ತಾವೆಲ್ಲರೂ ನಿಮ್ಮ ಸ್ವಂತ ಊರಿನಲ್ಲಿಯೇ ಇದ್ದು ಉದ್ಯೋಗ ಮಾಡಿ ಕೂಲಿ ಪಡೆಯಬೇಕು ಎಂದರು.
ಇದೇ ವೇಳೆ 12 ಜನ ಕೂಲಿಕಾರರಿಗೆ ಹೊಸದಾಗಿ ಉದ್ಯೋಗ ಚೀಟಿಗಳನ್ನು ವಿತರಿಸಿದರು. ನರೇಗಾ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು 70 ಜನ ಕೂಲಿಕಾರರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಮುಂದುವರೆದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದಾಗಿ ಕುಳಿತು ಇ-ಶ್ರಮ್ ಪೋರ್ಟಲ್ ನಲ್ಲಿ ನರೇಗಾ ಕೂಲಿಕಾರರ ನೊಂದಣಿ ಮಾಡಿಸಿದರು. ಈ ವೇಳೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹೆಗಡಿಹಾಳ ಗ್ರಾಮದ ಅಮೃತ ಸರೋವರ ಕೆರೆಯನ್ನು ವೀಕ್ಷಿಸುತ್ತ ಕೆರೆಯ ಒಳಹರಿವು/ಹೊರಹರಿವು (Inlet/Outlet) ಗಳನ್ನು ವ್ಯವಸ್ಥಿತವಾಗಿ ರೂಪಿಸಬೇಕು, ಕೆರೆ ಸುತ್ತಲೂ ಕಲ್ಲು ಪಿಚ್ಚಿಂಗ್ ಮಾಡಿ ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ವಿಜಯಪರ ಜಿಲ್ಲಾ ಪಂಚಾಯತಿಯ ಮಾನ್ಯ ಉಪ ಕಾರ್ಯದರ್ಶಿಗಳಾದ ಡಾ.ವಿಜಯಕುಮಾರ ಅಜೂರ, ಸಹಾಯಕ ಯೋಜನಾಧಿಕಾರಿಗಳಾದ ಅರುಣಕುಮಾರ ದಳವಾಯಿ, ವಿಜಯಪುರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ. ಹೊಂಗಯ್ಯ, ವಿಜಯಪುರ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕರು (ಗ್ರಾ.ಉ) ಕಾಶಿಮಸಾಬ ಮಸಳಿ, ಜಿಲ್ಲಾ ಪಂಚಾಯತಿಯ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳಾದ ಪೃಥ್ವಿರಾಜ ಪಾಟೀಲ, ಹೆಗಡಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರಾಮಸಿಂಗ ಲಮಾಣಿ, ಹೆಗಡಿಹಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜಾಫರ ಕಲಾದಗಿ ಹಾಗೂ ಇತರರು ಉಪಸ್ಥಿತರಿದ್ದರು.