ಉಪನ್ಯಾಸಕರ ಹುದ್ದೆ: ಹೊಸದಾಗಿ 5,000 ಕಾಯಂ ಹುದ್ದೆ ನೇಮಕಕ್ಕೆ ಪ್ರಸ್ತಾವನೆ

ಉಪನ್ಯಾಸಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ ಎನ್ನುವಂತೆ ಹೊಸದಾಗಿ 5 ಸಾವಿರ ಕಾಯಂ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅತಿಥಿ ಉಪನ್ಯಾಸಕರ ಸಂಖ್ಯೆ ಕೂಡ ಹೆಚ್ಚಳ ಮಾಡುವುದಾಗಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಬಿ.ಎ, ಬಿ.ಕಾಂ, ಬಿ.ಎಸ್ಸಿ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಉಚಿತ ತರಬೇತಿ/ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಹಾಗೂ ‘ಸ್ಪರ್ಧಾ ಅರಿವು’ ನಿಯತಕಾಲಿಕೆ ಗುರುವಾರ ಒಡಂಬಡಿಕೆ ಮಾಡಿಕೊಂಡವು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮತ್ತು ‘ಸ್ಪರ್ಧಾ ಅರಿವು’ ಸಿಇಒ ಸತೀಶ ಗೌಡ ಅವರು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಕೇಂದ್ರ ಸರಕಾರಿ ಸೇವೆಗಳಿಗೆ ನಮ್ಮ ಕರ್ನಾಟಕದಿಂದ ನೇಮಕವಾಗುವವರ ಸಂಖ್ಯೆ ಇನ್ನೂ ಹೆಚ್ಚಾಗಬೇಕು’ ಎಂದರು.
ಸ್ಟ್ಯಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್ಸಿ) ಮೂಲಕ ಸದ್ಯದಲ್ಲೇ 30 ಸಾವಿರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳಿಗೆ ಹಾಗೂ ಯುಪಿಎಸ್ಸಿ ನಡೆಸುವ ನೇಮಕಾತಿಗಳಿಗೆ ನಮ್ಮ ಕರ್ನಾಟಕದವರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕೆಂಬುದು ಈ ಒಡಂಬಡಿಕೆಯ ಉದ್ದೇಶ ಎಂದು ಅವರು ವಿವರಿಸಿದರು.

ಬಿಎ, ಬಿಕಾಂ, ಬಿಎಸ್ಸಿ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ಕೋರ್ಸ್ ಗಳ ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ಎಸ್‌ಎಸ್ ಸಿ ಮೂಲಕ ವಿವಿಧ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಿಗೆ ತರಬೇತಿ ಕೊಡಲಾಗುವುದು. ನೋಂದಣಿ ಮಾಡಿಸಿಕೊಳ್ಳುವ ಪ್ರತಿ ಅಭ್ಯರ್ಥಿಯು ಮೊಬೈಲ್ ಮೂಲಕ ಪ್ರತಿ ತಿಂಗಳು ಹೊಸ ಹಾಗೂ ಪರಿಷ್ಕೃತ ಮಾಹಿತಿಗಳಿಂದ ಕೂಡಿದ ನಿಯತಕಾಲಿಕವನ್ನು ಅಧ್ಯಯನ ಮಾಡಬಹುದು. ಕ್ಯುಆರ್ ಕೋಡ್ ಮೂಲಕ ಇದನ್ನು ನೋಡುವ ಅವಕಾಶವನ್ನೂ ಒದಗಿಸಲಾಗುತ್ತದೆ. ತಯಾರಿ ಭಾಗವಾಗಿ ವಾರಕ್ಕೊಮ್ಮೆ ಸ್ಟಡಿ ಪ್ಲಾನ್ ಸಿದ್ದಪಡಿಸುವ ಜೊತೆಗೆ ಪರೀಕ್ಷೆಯನ್ನೂ ನಡೆಸಲಾಗುವುದು.

ಅಲ್ಲದೆ, ಶಿಕ್ಷಕರ ಮೂಲಕ ತರಬೇತಿಗೂ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೊಸದಾಗಿ ಐದು ಸಾವಿರ ಕಾಯಂ ಹುದ್ದೆಗಳ ನೇಮಕಾತಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಇದರ ಜೊತೆಗೆ ಇನ್ನೂ ಅತಿಥಿ ಉಪನ್ಯಾಸಕರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಕ್ಕಂತೆ ಸರ್ಕಾರಿ ಕಾಲೇಜುಗಳಲ್ಲಿನ ಪ್ರವೇಶಾತಿ ಸಂಖ್ಯೆಯನ್ನು ಈಗಿರುವ 5 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಬೇಕು ಎಂದು ಹೇಳಿದರು. ಆಯುಕ್ತರಾದ ಪ್ರದೀಪ ಅವರು ಯೋಜನೆ ಬಗ್ಗೆ ವಿವರಿಸಿದರು.’ಸ್ಪರ್ಧಾ ಅರಿವು’ ನಿರ್ದೇಶಕ ಗಿರೀಶ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಅಪ್ಪಾಜಿ ಗೌಡ, ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಶ್ರೀಕಾಂತ್ ಅವರು ಇದ್ದರು. ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕ ಹೆಬ್ಬಾರ್ ವಂದಿಸಿದರು.

Latest Indian news

Popular Stories