ಎಸ್.ಡಿ.ಪಿ.ಐ ಕಚೇರಿಗಳ ಮೇಲೆ ದಾಳಿ ನಡೆಸಲು ಕೇಂದ್ರ ನೀಡಿರುವ ನಿರ್ದೇಶನದ ಕುರಿತು ದಾಖಲೆ‌ ನೀಡಿ – ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಫೆಬ್ರವರಿ 8: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಚೇರಿಗಳ ಮೇಲೆ ದಾಳಿ ನಡೆಸಲು ಕೇಂದ್ರ ಸರ್ಕಾರ ನಿರ್ದೇಶನ ನೀಡುತ್ತಿದೆಯೇ ಎಂಬುದರ ಕುರಿತು ಕರ್ನಾಟಕ ಹೈಕೋರ್ಟ್ ಬುಧವಾರ ಸ್ಪಷ್ಟನೆ ಕೇಳಿದೆ. ಈ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

ಎಸ್‌ಡಿಪಿಐನ ಆಸ್ತಿಗಳನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತಕ್ಕೆ ನಿರ್ದೇಶನ ನೀಡುವಂತೆ ಕೋರಿ ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ.

ಪೂರ್ವ ಸೂಚನೆ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಡಿಪಿಐನ 17 ಕಚೇರಿಗಳಿಗೆ ಸೀಲ್‌ ಹಾಕಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಿವರಿಸಿದರು. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಎಸ್‌ಡಿಪಿಐ ಸಿದ್ಧತೆ ನಡೆಸಬೇಕಿದೆ ಎಂದು ವಕೀಲರು ತಿಳಿಸಿದ್ದಾರೆ.

ಕಚೇರಿಗಳಿಗೆ ಬೀಗ ಹಾಕಿರುವುದರಿಂದ ಯಾವುದೇ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಕಚೇರಿಗಳನ್ನು ತೆರೆಯಲು ನಿರ್ದೇಶನ ನೀಡುವಂತೆ ಪೀಠಕ್ಕೆ ಮನವಿ ಮಾಡಿದರು.

ಎಸ್‌ಡಿಪಿಐ ಬೇಡಿಕೆಗೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ”ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ ಐ)ಯನ್ನು ಕೇಂದ್ರ ಸರಕಾರ ನಿಷೇಧಿಸಿದೆ.ಎಸ್ ಡಿಪಿಐ ಕಚೇರಿಗಳಲ್ಲಿ ಪಿಎಫ್ ಐಗೆ ಸಂಬಂಧಿಸಿದ ಸಾಮಗ್ರಿಗಳು ಪತ್ತೆಯಾಗಿವೆ.ಕೇಂದ್ರ ಸರಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕೇಂದ್ರದ ನಿರ್ದೇಶನಗಳ ಬಗ್ಗೆ ಸರ್ಕಾರಕ್ಕೆ ಪೀಠವು ಪ್ರಶ್ನೆಗಳನ್ನು ಹಾಕಿತು ಮತ್ತು ಈ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತು. ಪ್ರಕರಣದ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಲಾಗಿದೆ.

Latest Indian news

Popular Stories