ಚೆನ್ನೈ: ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ. ಐಪಿಎಲ್ 2022ರ ವೇಳಾಪಟ್ಟಿಯನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದ್ದು, ಕ್ರಿಕೆಟ್ ಬಜ್ ವರದಿ ಪ್ರಕಾರ, ಐಪಿಎಲ್ 15 ನೇ ಸೀಸನ್ನ ವೇಳಾಪಟ್ಟಿಯನ್ನು ಈಗಾಗಲೇ ಅಂತಿಮಗೊಳಿಸಲಾಗಿದೆಯಂತೆ.
ಏಪ್ರಿಲ್ 2 ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ಪ್ರಾರಂಭವಾಗುವ ಸಾಧ್ಯತೆಯಿದ್ದು, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆಯಂತೆ . ಆದರೆ, ಮುಂದಿನ ವರ್ಷದ ಋತುವಿನಲ್ಲಿ ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಲೀಗ್ ಇನ್ನಷ್ಟು ರೋಚಕವಾಗಲಿದೆ.
ಪ್ರತಿ ಸೀಸನ್ ನಲ್ಲಿ ಈವರೆಗೆ 60 ಪಂದ್ಯಗಳು ನಡೆಯುತ್ತಿದ್ದವು. ಎರಡು ಹೊಸ ತಂಡಗಳ ಸೇರ್ಪಡೆಯೊಂದಿಗೆ ಪಂದ್ಯಗಳ ಸಂಖ್ಯೆ 74 ಕ್ಕೆ ಹೆಚ್ಚಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಸೀಸನ್ 60 ದಿನಗಳ ಕಾಲ ನಡೆಯಲಿದೆ ಎಂದು ವರದಿ ಹೇಳಿದೆ. ಜೂನ್ 4 ಅಥವಾ ಜೂನ್ 5 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯುವ ಸಾಧ್ಯತೆ ಇದೆ.
ಏತನ್ಮಧ್ಯೆ, ಚೆನ್ನೈನಲ್ಲಿ ಇತ್ತೀಚಿಗೆ ನಡೆದ ‘ದಿ ಚಾಂಪಿಯನ್ಸ್ ಕಾಲ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಸಿಸಿಐ ಕಾರ್ಯದರ್ಶಿ ಜೈ ಶಾ, ಮುಂದಿನ ಸೀಸನ್ ಭಾರತದಲ್ಲಿ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದರು.