ಐಷಾರಾಮಿ ಕಾರುಗಳ ಒಡೆಯ ಶಾಸಕ ದೇವಾನಂದ ಚವ್ಹಾಣ

ವಿಜಯಪುರ : ನಾಗಠಾಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಹಾಗೂ ಹಾಲಿ ಶಾಸಕರಾಗಿರುವ ಡಾ.ದೇವಾನಂದ ಚವ್ಹಾಣ ಸಹ ಕೋಟಿ ವೀರರು. ಬೆಲೆಬಾಳುವ ಐಷಾರಾಮಿ ಕಾರುಗಳ ಒಡೆಯರು.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ತಮ್ಮ ಆಸ್ತಿ ವಿವರವನ್ನು ಡಾ.ದೇವಾನಂದ ಘೋಷಣೆ ಮಾಡಿದ್ದು ಅದರನ್ವಯ ಒಟ್ಟು 1,80,20,326 ರೂ. ಚರಾಸ್ತಿ ಹಾಗೂ 1,28,40,000 ರೂ. ಸ್ಥಿರಾಸ್ತಿ ಹೊಂದಿದ್ದು, ಸ್ಥಿರಾಸ್ತಿಗಿಂತ ಚರಾಸ್ತಿಯನ್ನೇ ಅಧಿಕ ಪ್ರಮಾಣದಲ್ಲಿ ಹೊಂದಿದ್ದಾರೆ.

ಡಾ.ದೇವಾನಂದ ಚವ್ಹಾಣ ಅವರ ಬಳಿ 1,80,20,326 ರೂ. ಚರಾಸ್ತಿ ಇದ್ದು, ಅವರ ಧರ್ಮಪತ್ನಿ ಡಾ.ಸುನೀತಾ ಚವ್ಹಾಣ ಅವರ ಬಳಿ 1,62,13,016 ರೂ. ಚರಾಸ್ತಿ ಇದ್ದು, ಡಾ.ದೇವಾನಂದ ಅವರ ಪುತ್ರಿ ಕೀರ್ತಿ ಅವರ ಬಳಿ 12,13,800 ರೂ. ಚರಾಸ್ತಿ ಇದ್ದರೆ, ಡಾ.ದೇವಾನಂದ ಅವರ ಪುತ್ರ ಅಭಿನವ ಬಳಿ 50,47,318 ರೂ. ಚರಾಸ್ತಿ ಇದೆ.

ಡಾ.ದೇವಾನಂದ ಅವರ ಬಳಿ 90 ಲಕ್ಷ ರೂ. ಮೌಲ್ಯದ ಬೆಂಜ್ ಕಾರು, ಕಮಾಂಡರ್ ಜೀಪ್ ಇದೆ. ಡಾ.ಸುನೀತಾ ಅವರ ಬಳಿ ಎರಡು ಟ್ರ್ಯಾಕ್ಟರ್, ಜೆಸಿಬಿ, ಸ್ಕೋಡಾ ಕೋಡಿಯಾಕ್ ವಾಹನಗಳಿವೆ. ಡಾ.ದೇವಾನಂದ ಚವ್ಹಾಣ ಅವರ ಬಳಿ 46 ಲಕ್ಷ ರೂ. ಮೌಲ್ಯದ 76 ತೊಲೆ ಬಂಗಾರ, 16 ಕೆಜಿ ಬೆಳ್ಳಿ ಇದೆ ಎಂದು ಅವರು ಘೋಷಿಸಿದ್ದಾರೆ.

ಸ್ಥಿರಾಸ್ತಿಯ ಪೈಕಿ ಪಿತ್ರಾರ್ಜಿತವಾಗಿ ಬಂದಿರುವ 60 ಲಕ್ಷ ರೂ. ಮೌಲ್ಯದ ಆಸ್ತಿ ಇದ್ದು, ಹಲವಾರು ಜಮೀನು, ಕೃಷಿಯೇತರ ಭೂಮಿ ಹೊಂದಿದ್ದಾರೆ, ಒಟ್ಟು ಡಾ.ದೇವಾನಂದ ಚವ್ಹಾಣ ಅವರ ಬಳಿ 1,28,40,000 ರೂ. ಸ್ಥಿರಾಸ್ತಿ ಇದ್ದು, ಅವರ ಧರ್ಮಪತ್ನಿ ಡಾ.ಸುನೀತಾ ಅವರ ಬಳಿ 1,61,05,000 ರೂ. ಸ್ಥಿರಾಸ್ತಿ ಇದ್ದರೆ, ಅಭಿನವ ಅವರ ಬಳಿ 49 ಲಕ್ಷ ರೂ. ಸ್ಥಿರಾಸ್ತಿ ಇದೆ ಎಂದು ಅವರು ಘೋಷಿಸಿದ್ದಾರೆ.

ಅದೇ ತೆರನಾಗಿ ಡಾ.ದೇವಾನಂದ ಚವ್ಹಾಣ ಅವರಿಗೆ 3,51,058 ಲಕ್ಷ ರೂ. ಸಾಲವಿದ್ದು, ಡಾ.ಸುನೀತಾ ಅವರಿಗೆ 2,19.73,511 ರೂ. ಸಾಲವಿದ್ದರೆ, ಅಭಿನವ ಅವರ ಹೆಸರಿನಲ್ಲಿ 16,32,751 ರೂ. ಸಾಲವಿದೆ ಎಂದು ಅವರು ಘೋಷಿಸಿದ್ದಾರೆ.

Latest Indian news

Popular Stories