ಒಂದು ಮತಕ್ಕೆ 6 ಸಾವಿರ ರೂ. ಆಮಿಷ: ಶಾಸಕ, ಸಿಎಂ, ಜೆಪಿ ನಡ್ಡಾ ವಿರುದ್ಧ ಕಾಂಗ್ರೆಸ್ ನಿಂದ ದೂರು


ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನಿಹದಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ  ಲಂಚದ ಆಮಿಷವೊಡ್ಡಿರುವ ಆರೋಪದ ಮೇಲೆ ಶಾಸಕ ರಮೇಶ್ ಜಾರಕಿಹೊಳಿ, ಬಿಜೆಪಿ ರಾಷ್ಟ್ರಾಧ್ಯಕ್ಷ, ಸಿಎಂ ಬಸವಾರಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಪಕ್ಷ ಪೊಲೀಸರಿಗೆ ದೂರು ನೀಡಿದೆ.


ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ದೂರಿನ ಪತ್ರಕ್ಕೆ ಸಹಿ ಹಾಕಿದ್ದು, ತಮ್ಮ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. 

ಗೋಕಾಕ್ ಬಿಜೆಪಿ ಶಾಸಕ ಜಾರಕಿಹೊಳಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿ ಮತಕ್ಕೆ 6,000 ರೂಪಾಯಿ ನೀಡುವುದಾಗಿ ಇತ್ತೀಚೆಗೆ ಸಾರ್ವಜನಿಕವಾಗಿ ಹೇಳಿದ್ದರು. ಸೆಕ್ಸ್ ಹಗರಣದಲ್ಲಿ ಸಿಲುಕಿದ್ದ ಜಾರಕಿಹೊಳಿ, 2021 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ಈಗ ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ್ದ ಜಾರಕಿಹೊಳಿ, ಹಾಲಿ ಕಾಂಗ್ರೆಸ್ ಶಾಸಕ 3,000 ರೂಪಾಯಿ ಮೌಲ್ಯದ ಉಡುಗೊರೆ ಹಾಗೂ ನಗದುಗಳನ್ನು ನೀಡಿದರೆ, ನಾನು ಮತದಾರರಿಗೆ 6,000 ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡುತ್ತೇನೆ ಎಂದು ಜಾರಕಿಹೊಳಿ ಹೇಳಿದ್ದರು. 

ಜಾರಕಿಹೊಳಿ ಅವರ ಈ ಹೇಳಿಕೆಯಿಂದ ಬಿಜೆಪಿಯೇನೋ ಅಂತರ ಕಾಯ್ದುಕೊಂಡಿದೆ, ಆದರೆ ಕಾಂಗ್ರೆಸ್ ಜಾರಕಿಹೊಳಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದೆ.

2023 ರ ಜನವರಿ 22  ರಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಬೆಳಗಾವಿಯಲ್ಲಿ ಮಾತನಾಡಿ ಕರ್ನಾಟಕದ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪ್ರತಿ ಮತಕ್ಕೆ 6,000 ರೂಪಾಯಿ ನೀಡಲಿದೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕ್ಯಾಮರಾದಲ್ಲೂ ಸೆರೆಯಾಗಿದೆ ಎಂದು ಹೈ ಗ್ರೌಂಡ್ಸ್ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಕಾಂಗ್ರೆಸ್ ಹೇಳಿದೆ 
 
ಇದು ಬಿಜೆಪಿ ವರಿಷ್ಠರೇ ರೂಪಿಸಿರುವ ಪಿತೂರಿಯಾಗಿದ್ದು, ಸಿಎಂ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೂ ಈ ಪಿತೂರಿಯಲ್ಲಿ ಭಾಗವಹಿಸಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ.

ಈ ಹೇಳಿಕೆಯ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರೇ ಇದ್ದು ಇದು ಮತದಾರರನ್ನು ಭ್ರಷ್ಟಗೊಳಿಸುವ ಸಂಘಟಿತ ವಿನ್ಯಾಸ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿಯ ಈ ಕೃತ್ಯ ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವುದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, 1860 ರ ಐಸಿಸಿಯ ಸೆಕ್ಷನ್ 171ಬಿ, 107, 120 B, 506  ಈ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ಅಷ್ಟೇ ಅಲ್ಲದೇ ಇದು 1951 ರ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 123 (1) ರ ಪ್ರಕಾರ ಮತದಾರರಿಗೆ ಲಂಚದ ಆಮಿಷವೊಡ್ಡುವುದಾಗಿದೆ ಎಂದು ಹೇಳಿದೆ.
 
ರಾಜ್ಯದಲ್ಲಿ 5 ಕೋಟಿ ಮತದಾರರಿದ್ದು ಬಿಜೆಪಿ ನಾಯಕರು 30,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಈ ಚುನಾವಣೆ ಗೆಲ್ಲಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 

Latest Indian news

Popular Stories