ಒಂಭತ್ತು ವರ್ಷದ ಬಾಲಕಿಯ ಮೇಲೆ 12 – 14 ವರ್ಷದ ಬಾಲಕರಿಂದ ಸಾಮೂಹಿಕ ಅತ್ಯಾಚಾರ – ಬಂಧನ

ಕಲಬುರಗಿ: ಆಘಾತಕಾರಿ ಘಟನೆಯೊಂದರಲ್ಲಿ, ಕಲಬುರಗಿ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿ ಮೇಲೆ ಅಪ್ರಾಪ್ತ ಬಾಲಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಈ ಸಂಬಂಧ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. 

ಕೃತ್ಯದ ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಪೊಲೀಸರು 12 ವರ್ಷದಿಂದ 14 ವರ್ಷದೊಳಗಿನ ನಾಲ್ವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಬಾಲಾಪರಾಧಿಗಳನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದ್ದು, ಐದನೇ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಕಲಬುರಗಿ ಮಹಿಳಾ ಠಾಣೆ ಪೊಲೀಸರು ಗುರುವಾರ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಬಾಲಕಿಯ ಪೋಷಕರು ಒಂದು ವಾರದ ಹಿಂದಷ್ಟೇ ಬಡಾವಣೆಯ ಮನೆಗೆ ಬಾಡಿಗೆಗೆ ಬಂದಿದ್ದರು. ಬುಧವಾರ ಮಧ್ಯಾಹ್ನ ಬಾಲಕಿ ಮನೆಯ ಎದುರು ಕುಳಿತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಮೂವರು ಬಾಲಕರು ಚಾಕೊಲೇಟ್ ಕೊಡಿಸುವ ನೆಪದಲ್ಲಿ  ಆಕೆಯನ್ನು ಮನೆಯೊಂದಕ್ಕೆ ಕರೆದೊಯ್ದು, ಅಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತೆ ಹಿಂದಿನ ದಿನ ಶಾಲೆಗೆ ಹೋಗಿದ್ದಳು ಮತ್ತು ಮನೆಗೆ ಹಿಂತಿರುಗಿದ ನಂತರ ಬಾದಾಮಿಯನ್ನು ಒಡೆಯಲು ಪ್ರತಯ್ನಿಸುತ್ತಾ ಕುಳಿತಿದ್ದ ವೇಳೆ ಬಾಲಕರ ಗುಂಪು ಆಕೆಯನ್ನು ಕರೆದೊಯ್ದಿದೆ. ಕೃತ್ಯ ಎಸಗಿದ ನಂತರ ಆರೋಪಿಗಳು ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಬೆದರಿಕೆಯೊಡ್ಡಿದ್ದು, ಯಾರೊಂದಿಗಾದರೂ ಬಾಯಿಬಿಟ್ಟರೆ ಆಕೆಯನ್ನು ಕೊಲ್ಲುವುದಾಗಿ ಹೇಳಿದ್ದಾರೆ. 

ಆಘಾತಕ್ಕೊಳಗಾದ ಬಾಲಕಿ ಮನೆಗೆ ಬಂದು ತಾಯಿಯ ಬಳಿ ಕೃತ್ಯವನ್ನು ಹೇಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 366 ಎ (ಲೈಂಗಿಕ ಅಪರಾಧಕ್ಕಾಗಿ ಅಪ್ರಾಪ್ತ ಬಾಲಕಿಯ ವಶ), 376 (ಜಿ) (ಗ್ಯಾಂಗ್-ರೇಪ್), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

Latest Indian news

Popular Stories