ಒಡಿಶಾದಲ್ಲಿ ಮತ್ತೆ ಹಿಂಸಾಚಾರ: ಸಂಬಲ್‌ಪುರದಲ್ಲಿ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ ಮುಂದುವರಿಕೆ

ಭುವನೇಶ್ವರ/ಸಂಬಲ್‌ಪುರ: ಒಡಿಶಾದ ಸಂಬಲ್‌ಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದಿದ್ದು, ಕರ್ಫ್ಯೂ ಜಾರಿಗೊಳಿಸಲಾಗಿದೆ ಮತ್ತು ಶನಿವಾರ ಇಂಟರ್ನೆಟ್ ಸೇವೆ ಸ್ಥಗಿತದ ಅವಧಿಯನ್ನು ಇನ್ನೂ 48 ಗಂಟೆಗಳ ಕಾಲ ವಿಸ್ತರಿಸಲಾಗಿದೆ.

ನಿನ್ನೆ ರಾತ್ರಿ ನಡೆದ ಹಿಂಸಾಚಾರದಲ್ಲಿ ಓರ್ವ ಮೃತಪಟ್ಟಿದ್ದು, ಸಂಬಲ್‌ಪುರ ಪಟ್ಟಣದ ರಿಂಗ್ ರೋಡ್ ಬಳಿ ಚೂರಿ ಇರಿತ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಆರೋಪಿಯು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾನೆ ಮತ್ತು ಅವನು ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ನಮ್ಮ ಪ್ರಾಥಮಿಕ ತನಿಖೆಯು ಕೊಲೆಯಲ್ಲಿ ಇನ್ನೂ ಒಬ್ಬರು ಭಾಗಿಯಾಗಿದ್ದಾರೆ ಮತ್ತು ಆ ಆರೋಪಿ ತಲೆಮರೆಸಿಕೊಂಡಿದ್ದಾನೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ ಎಂದರು.

ನಗರದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸುಮಾರು 35 ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.

“ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಮತ್ತು ಶೀಘ್ರದಲ್ಲೇ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ” ಎಂದು ಡಿಜಿಪಿ ಸುನಿಲ್ ಕುಮಾರ್ ಬನ್ಸಾಲ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಕಳೆದ ಬುಧವಾರ ಹನುಮ ಜಯಂತಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಳ್ಳು ವದಂತಿಗಳ ಹರಡುವಿಕೆ ತಡೆಯಲು ಒಡಿಶಾ ಸರ್ಕಾರ ಗುರುವಾರ ಬೆಳಗ್ಗೆ 10 ರಿಂದ 48 ಗಂಟೆಗಳ ಕಾಲ  ಸಂಬಲ್ಪುರ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಸಿತ್ತು.

ಬುಧವಾರ ಸಂಜೆ ಹನುಮ ಜಯಂತಿ ಆಚರಿಸುತ್ತಿದ್ದ ಬೈಕ್  ರ್‍ಯಾಲಿಯ ಮೇಲೆ ಕಲ್ಲು ತೂರಾಟ ನಡೆದಿದ್ದು, ಹಿಂಸಾಚಾರ ಭುಗಿಲೆದ್ದಿತ್ತು. ಇದರಲ್ಲಿ ಪೊಲೀಸ್ ಮಹಿಳೆ ಸೇರಿದಂತೆ ಕನಿಷ್ಠ 10 ಪೊಲೀಸರು ಗಾಯಗೊಂಡಿದ್ದರು. ಈ ಘಟನೆ ಸಂಬಂಧ ಇದುವರೆಗೆ ಸುಮಾರು 43 ಜನರನ್ನು ಬಂಧಿಸಲಾಗಿದೆ.  

Latest Indian news

Popular Stories