ಮಂಡ್ಯ : ಬ್ರಾಹ್ಮಣರು ಮುಖ್ಯಮಂತ್ರಿ ಆಗೋದಾದರೆ ಆಗಲಿ. ಬ್ರಾಹ್ಮಣರು ಮುಖ್ಯಮಂತ್ರಿಯಾಗಬಾರದೆಂದು ಎಲ್ಲಿದೆ? ಅವರು ಭಾರತದ ಪ್ರಜೆಗಳಲ್ಲವೇ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪ್ರಶ್ನಿಸಿದ್ದಾರೆ.
ಪಟ್ಟಣದ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ‘ಹಿಂದಿನಿಂದಲೂ ಬ್ರಾಹ್ಮಣರ ವಿರುದ್ಧದ ಹೇಳಿಕೆಗಳು ಬರುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗುತ್ತವೆ. ರಾಜ್ಯದಲ್ಲಿ ಬ್ರಾಹ್ಮಣ ಶಾಸಕರೆಷ್ಟಿದ್ದಾರೆ, ಎಷ್ಟು ಮಂದಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ’ ಎಂದು ಪ್ರಶ್ನಿಸಿದರು.
ಬ್ರಾಹ್ಮಣರು ಕಡಿಮೆ ಇದ್ದಾರೆಂಬ ಕಾರಣಕ್ಕೆ ಏನು ಮಾತನಾಡಿದರೂ ನಡೆಯುತ್ತದೆ ಎಂದು ಮಾತನಾಡುತ್ತಾರೆ. ಹಿನ್ನೆಲೆ ಅಥವಾ ಪುರಾವೆ ಇಟ್ಟುಕೊಂಡು ಮಾತನಾಡಬೇಕು ಎಂದು ಪ್ರತಿಪಾದಿಸಿದರು. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಆತನ ಇಡೀ ಸಮಾಜವನ್ನು ದೂಷಿಸುವುದಾದರೆ, ಇತರೆ ಸಮಾಜದಲ್ಲಿ ನಡೆದ ವಿಚಾರವನ್ನ ಏಕೆ ಸಾಮೂಹಿಕರಣ ಮಾಡುತ್ತಿಲ್ಲ? ಪ್ರಜಾಪ್ರಭುತ್ವದಲ್ಲಿ ಯಾರಿಗೂ ಅನ್ಯಾಯವಾಗಬಾರದು. ಯಾವುದೇ ಧರ್ಮವನ್ನು ದೂಷಿಸುವುದು ಸರಿಯಲ್ಲ. ಯಾರಿಗೂ ಅನ್ಯಾಯವಾಗಬಾರದು ಎಂದರು.
ಇವತ್ತು ಯಾವುದೋ ಸಮಾಜ, ಧರ್ಮದ ಪರವಾಗಿ ಸರ್ಕಾರ ನಡೆದರೆ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮ ಪುಟಿದೇಳಬೇಕು. ಅದನ್ನು ಬಿಟ್ಟು ಪ್ರಜಾಪ್ರಭುತ್ವ ಸಮಾಜದಲ್ಲಿ ಈ ರೀತಿ ಒಂದು ಧರ್ಮವನ್ನು ದೂಷಿಸುವುದು ಸರಿಯಲ್ಲ. ಯಾವ ಧರ್ಮಕ್ಕೂ ಅನ್ಯಾಯ ಆಗಬಾರದು ಎಂದು ಹೇಳಿದರು.