ಕರಾವಳಿಯ ದೋಣಿಗಳಿಗೆ ಹೆಚ್ಚುವರಿ ಸೀಮೆಎಣ್ಣೆ ನೀಡುತ್ತೇವೆ ಎಂದ ಶೋಭಾ ಕರಂದ್ಲಾಜೆ

ಉಡುಪಿ: ಕರ್ನಾಟಕ ಕರಾವಳಿಯಲ್ಲಿ ಸಾಂಪ್ರದಾಯಿಕ ಉದ್ಯೋಗವಾಗಿರುವ ಮೀನುಗಾರಿಕೆ ಚಟುವಟಿಕೆಗೆ ಮೀಸಲಾದ ಸೀಮೆಎಣ್ಣೆಯು ಸಕಾಲದಲ್ಲಿ ಉದ್ದೇಶಿತ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇಲ್ಲಿನ ಮೀನುಗಾರರ ಒಕ್ಕೂಟವು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪರ್ಕಿಸಿದ್ದು, ಈ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಈ ಪ್ರದೇಶಕ್ಕೆ ಮೀಸಲಿಟ್ಟಿರುವ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಮತ್ತು ಅವರ ಹಿತಾಸಕ್ತಿಗಳನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವಂತೆ ಕೋರಿಕೊಂಡಿದೆ.

ರಾಜ್ಯವು 10,100 ಕ್ಕೂ ಹೆಚ್ಚು ಸಂಪ್ರದಾಯಿಕ ದೋಣಿಗಳನ್ನು ಹೊಂದಿದ್ದು, 60,000 ಕ್ಕೂ ಹೆಚ್ಚು ಮೀನುಗಾರರು ತಮ್ಮ ಜೀವನಕ್ಕಾಗಿ ಇದನ್ನು ಅವಲಂಬಿಸಿದ್ದಾರೆ. ನಾಡದೋಣಿ ಮೀನುಗಾರಿಕೆಯು ಸಂಪೂರ್ಣವಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡುವ ಸೀಮೆಎಣ್ಣೆ ಮೇಲೆ ಅವಲಂಬಿತವಾಗಿದೆ.

ಕರ್ನಾಟಕ ಕರಾವಳಿಯ ಮೀನುಗಾರರು ಎದುರಿಸುತ್ತಿರುವ ತೊಂದರೆಗಳನ್ನು ಕೇಂದ್ರ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಪೆಟ್ರೋಲಿಯಂ ಸಚಿವರ ಗಮನಕ್ಕೆ ತಂದಿದ್ದು, ಕರ್ನಾಟಕಕ್ಕೆ ಹೆಚ್ಚುವರಿ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಮೀನುಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ಕೇಂದ್ರ ಪೆಟ್ರೋಲಿಯಂ ಸಚಿವರು ಸೋಮವಾರ ಜನವರಿ 24 ರಂದು ಆದೇಶವನ್ನು ಹೊರಡಿಸಿದ್ದಾರೆ‌ 2021-22 ನೇ ಸಾಲಿಗೆ ಕರ್ನಾಟಕಕ್ಕೆ ಹೆಚ್ಚುವರಿ 35.4 ಲಕ್ಷ ಲೀಟರ್ ಸೀಮೆಎಣ್ಣೆ ಬಿಡುಗಡೆ ಮಾಡಿರುವ ಕುರಿತು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಈಗಾಗಲೇ ಕರ್ನಾಟಕಕ್ಕೆ 70.8 ಲಕ್ಷ ಲೀಟರ್ ಸೀಮೆಎಣ್ಣೆ ಬಿಡುಗಡೆ ಮಾಡಿದೆ. ಹೆಚ್ಚುವರಿ ಸೀಮೆಎಣ್ಣೆ ನೀಡಬೇಕು ಎಂದು ಮೀನುಗಾರರು ಒತ್ತಾಯಿಸಿದರು. ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಈ ಬೇಡಿಕೆ ಈಗ ಈಡೇರಿದೆ. ಈ ಹೆಚ್ಚುವರಿ ಸೀಮೆಎಣ್ಣೆಯನ್ನು ವಿತರಣಾ ವ್ಯವಸ್ಥೆಯಿಂದ ಮೀನುಗಾರಿಕೆ ಉದ್ದೇಶಕ್ಕಾಗಿ ವಿತರಿಸಲಾಗುವುದು ಎಂದು ಕರಂದ್ಲಾಜೆ ತಿಳಿಸಿದ್ದಾರೆ. ಮೀನುಗಾರರ ಬೇಡಿಕೆಯನ್ನು ತ್ವರಿತವಾಗಿ ಈಡೇರಿಸಿದ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

Latest Indian news

Popular Stories