‘ಕರ್ನಾಟಕದ ವಿಕಾಸವೆಂದರೆ ದೇಶದ ವಿಕಾಸ, ರಾಜ್ಯದ ಅಭಿವೃದ್ಧಿಗೆ ಪೂರ್ಣ ಬಹುಮತ ನೀಡಿ ಬಿಜೆಪಿಯನ್ನು ಗೆಲ್ಲಿಸಿ’: ವರ್ಚುವಲ್ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ 

ನವದೆಹಲಿ/ಬೆಂಗಳೂರು: ಕರ್ನಾಟಕ ರಾಜ್ಯದ ಜನತೆಯ ಆಶೀರ್ವಾದ ಪಡೆಯಲು ಇನ್ನೆರಡು ದಿನಗಳಲ್ಲಿ ಕರ್ನಾಟಕಕ್ಕೆ ಭೇಟಿ ನೀಡುತ್ತೇನೆ. ರಾಜ್ಯದಲ್ಲಿ ಪ್ರಚಾರ ನಡೆಸಿರುವ ಬಿಜೆಪಿ ನಾಯಕರು ಅಲ್ಲಿನ ಜನರಿಂದ ಅಪಾರ ಪ್ರೀತಿ, ವಿಶ್ವಾಸ ಪಡೆದಿದ್ದಾರೆ. ಇದು ಬಿಜೆಪಿ ಮೇಲಿನ ಜನರ ವಿಶ್ವಾಸವನ್ನು ತೋರಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರನ್ನು ವರ್ಚುವಲ್ ಸಂವಾದ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಇತರ ಪಕ್ಷಗಳ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಕಾರ್ಯವಿಧಾನ. ನಮ್ಮ ವಿರೋಧಿಗಳ ಅಜೆಂಡಾ ಅಧಿಕಾರ ಹಿಡಿಯುವುದಾಗಿದೆ. ಮುಂಬರುವ 25 ವರ್ಷಗಳಲ್ಲಿ ದೇಶವನ್ನು ಅಭಿವೃದ್ಧಿಪಡಿಸುವುದು, ಬಡತನದಿಂದ ಮುಕ್ತಗೊಳಿಸುವುದು ಮತ್ತು ಯುವಕರ ಸಾಮರ್ಥ್ಯವನ್ನು ಮುಂಚೂಣಿಯಲ್ಲಿರಿಸುವುದು ಬಿಜೆಪಿಯ ಉದ್ದೇಶ ಮತ್ತು ಅಜೆಂಡಾವಾಗಿದೆ ಎಂದರು.

ಕರ್ನಾಟಕದ ಪ್ರಗತಿ ದೇಶದ ಪ್ರಗತಿ: ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಸಾಧ್ಯ. ಬಡವರಿಗೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಾಂಗ್ರೆಸ್​ ಸರ್ಕಾರ ಇರುವ ರಾಜ್ಯಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ತೀರ್ಪು ನಾವೆಲ್ಲರೂ ಸ್ವಾಗತಿಸಬೇಕು. ಆದರೆ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರದ ಅಗತ್ಯವಿದೆ ಎಂದು ಸಂವಾದದಲ್ಲಿ ಪ್ರಧಾನಿಗಳು ಒತ್ತಿ ಹೇಳಿದರು.

7 ವರ್ಷಗಳಲ್ಲಿ 3 ಪಟ್ಟು ಏಮ್ಸ್​ ಆಸ್ಪತ್ರೆಗಳ ನಿರ್ಮಾಣ ಹೆಚ್ಚಳ: ಬೂತ್​ ಮಟ್ಟದಲ್ಲಿ ಬಿಜೆಪಿ ಬಲಪಡಿಸಬೇಕು. 2014ರ ಮೊದಲು 1 ಮನೆ ನಿರ್ಮಿಸಲು 300 ದಿನ ತೆಗೆದುಕೊಳ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 100 ದಿನಗಳಲ್ಲಿ ಮನೆಗಳ ನಿರ್ಮಾಣವಾಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡಿದ್ದೇವೆ ಎಂದರು. ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್​ ಆಸ್ಪತ್ರೆ ನಿರ್ಮಿಸಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 3 ಪಟ್ಟು ಹೆಚ್ಚಳವಾಗಿದೆ. ಕೇವಲ 7 ವರ್ಷಗಳಲ್ಲಿ 3 ಪಟ್ಟು ಏಮ್ಸ್​ ಆಸ್ಪತ್ರೆಗಳ ನಿರ್ಮಾಣ ಮಾಡಲಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಟೀಕೆ ಮಾಡಿದರು.

ಕರ್ನಾಟಕದ ಯುವಪೀಳಿಗೆಯ ಭವಿಷ್ಯದ ಬಗ್ಗೆ ಯೋಚಿಸಬೇಕಿದೆ. ಅದಕ್ಕಾಗಿಯೇ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಬಿಜೆಪಿಗೆ ಯಾವುದೇ ಶಾರ್ಟ್​ ಕಟ್​​ ಇಲ್ಲ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ಸದಾ ಶ್ರಮಿಸುತ್ತದೆ. ಕೊವಿಡ್ ಸಂದರ್ಭದಲ್ಲಿ ಬಡವರಿಗೆ ಉಚಿತ ಅಕ್ಕಿ ವಿತರಣೆ ನೀಡಿದ್ದೇವೆ. ದೇಶದಲ್ಲಿ 25 ವರ್ಷಗಳ ಹಿಂದೆ ವೈದ್ಯರ ಸಂಖ್ಯೆ ಬಹಳ ಕಡಿಮೆ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ವೈದ್ಯರ ಸಂಖ್ಯೆ ಬಹಳಷ್ಟು ಹೆಚ್ಚಿದೆ ಎಂದರು.

ಡಬಲ್ ಎಂಜಿನ್ ಸರ್ಕಾರ ಬೇಕು: ಕರ್ನಾಟಕ ಹನುಮನ ಜನ್ಮಸ್ಥಳ ಹಾಗೂ ಸಾಂಸ್ಕೃತಿಕ ರಾಜ್ಯವಾಗಿದೆ. ಆಧ್ಯಾತ್ಮಿಕತೆಯಲ್ಲಿ ಸಾಕಷ್ಟು ಸಾಧನೆ ಮಾಡಿದೆ. ಆಧಾತ್ಮಿಕತೆ ಸಮಾಜ ಒಗ್ಗೂಡಿಸಿಕೊಂಡು ಹೋಗಲು ಪ್ರಮುಖ ಪಾತ್ರ ವಹಿಸಿದೆ ಎಂದ ಪ್ರಧಾನಿ ಮೋದಿ ಕನಕದಾಸರು, ಶಿವ ಶರಣರ ಬಗ್ಗೆ ಮೋದಿ ಉಲ್ಲೇಖ ಮಾಡಿದರು. ಕನ್ನಡ ಭಾಷೆ ಸಮೃದ್ಧ ಸಾಹಿತ್ಯವನ್ನು ಹೊಂದಿದೆ. ಕರ್ನಾಟಕದ ಜನರನ್ನು ದಶಕದಿಂದಲೂ ನಾನು ನೋಡುತ್ತಿದ್ದೇನೆ. ರಾಜಕೀಯಕ್ಕೆ ಬರುವ ಮೊದಲು ಹಲವು ಬಾರಿ ಕರ್ನಾಟಕಕ್ಕೆ ಬಂದಿದ್ದೇನೆ. ಡಬಲ್​ ಇಂಜಿನ್​ ಸರ್ಕಾರದಿಂದ ಮಾತ್ರ ಬದಲಾವಣೆ ಸಾಧ್ಯ ಎಂದರು.

Latest Indian news

Popular Stories