ಹುಬ್ಬಳ್ಳಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹಾಗೂ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ 27 ಆಪ್ತರನ್ನು ಬಿಜೆಪಿ ಪಕ್ಷದಿಂದ ಶುಕ್ರವಾರ ಉಚ್ಚಾಟನೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಬಿಜೆಪಿ ಬ್ಲಾಕ್ ಅಧ್ಯಕ್ಷ ಸಂತೋಷ್ ಚವ್ಹಾಣ ಈ ಆದೇಶ ಹೊರಡಿಸಿದ್ದು, ಪಕ್ಷದ ಅಭ್ಯರ್ಥಿ ಘೋಷಣೆಯಾಗಿದ್ದರೂ ಜಗದೀಶ್ ಶೆಟ್ಟರ್ ಪರ ನಿಂತಿದ್ದ ಹಿನ್ನೆಲೆ ಮಲ್ಲಿಕಾರ್ಜುನ ಸಾಹುಕಾರ, ನಾಗೇಶ್ ಕಲಬುರಗಿ, ರಾಧಾ ಪಟ್ಟಣಶೆಟ್ಟಿ, ಮಹೇಶ್ ಪತ್ತಾರ್, ವಿರೂಪಾಕ್ಷಿ ರಾಯನಗೌಡ ಸೇರಿ 27 ಜನರನ್ನು ಉಚ್ಚಾಟನೆ ಮಾಡಲಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಹೇಶ್ ಟೆಂಗಿನಕಾಯಿ ಅವರನ್ನು ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ ಚವ್ಹಾಣ ಅವರು, ‘ಶೆಟ್ಟರ್ ಆಪ್ತರಾದ ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಕೆಎಸ್ಡಿಎಲ್ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಮಹೇಶ ಬುರ್ಲಿ, ಭಾರತಿ ಟಪಾಲ, ಅಲ್ಪಸಂಖ್ಯಾತ ಮೋರ್ಚಾದ ಹಟೇಲಸಾಬ ಮುಲ್ಲಾ ಸೇರಿದಂತೆ 27 ಮಂದಿಯನ್ನು ಪಕ್ಷ ವಿರೋಧಿ ಚಟುವಟಿಕೆಗಾಗಿ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಉಚ್ಚಾಟನೆಯಾಗಿರುವವರ ಪೈಕಿ ಕೆಲವರು ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.