ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಈ ಮಾಸಾಂತ್ಯದೊಳಗೆ ಅಂತಿಮಗೊಳಿಸಲು ನಿರ್ಧರಿಸಿರುವ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆ ಅಂತಿಮ ಕಸರತ್ತಿಗೆ ಅಧಿಕೃತವಾಗಿ ಚಾಲನೆ ನೀಡಿದೆ.
ಕರ್ನಾಟಕ ಚುನಾವಣೆಯ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರು ರವಿವಾರ ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ ಹಾಗೂ ಧ್ರುವನಾರಾಯಣ ಹಾಗೂ ರಾಜ್ಯ ಚುನಾವಣೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಕಾರ್ಯದರ್ಶಿಗಳೊಂದಿಗೂ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಕೆಲಸದಲ್ಲಿ ನಿರತರಾಗಿದ್ದಾರೆ. ಕಾರ್ಯಾಧ್ಯಕ್ಷರು ರಾಜ್ಯ ಪ್ರವಾಸ ಮಾಡಿ ಸಂಗ್ರಹಿಸಿರುವ ಮಾಹಿತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.
ಗೆಲುವಿನ ಮಾನದಂಡವನ್ನೇ ಪ್ರಮುಖ ಅರ್ಹತೆಯಾಗಿ ಪರಿಗಣಿಸಲು ನಿರ್ಧರಿಸಿರುವ ಕಾಂಗ್ರೆಸ್ ಹೈಕಮಾಂಡ್, ಈ ಹಿಂದೆ ಹೊಂದಾಣಿಕೆ, ಸೀಟು ಹಂಚಿಕೆಯಿಂದ ಆಗಿರುವ ನಷ್ಟದಿಂದ ಪಾಠ ಕಲಿತಿದ್ದು ಅದು ಮರುಕಳಿಸದಂತೆ ಎಚ್ಚರ ವಹಿಸಿದೆ. ಹೀಗಾಗಿ ಸ್ಥಳೀಯ ನಾಯಕರ ಸೀಟು ಕೋಟಾಗೆ ಪೂರ್ಣ ವಿರಾಮ ಹಾಕಿ ಪ್ರತಿಯೊಂದು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ತೀರ್ಮಾನಕ್ಕೆ ಒಳಪಡಲಿದೆ. ಈಗ ಸೋಲು-ಗೆಲುವಿನ ಹೊಣೆಯನ್ನು ಹೈಕಮಾಂಡ್ ತನ್ನ ಹೆಗಲಿಗೆ ಹಾಕಿಕೊಂಡಿದೆ.
ನಾಯಕರ ಭೇಟಿ
ಕಾರ್ಯಾಧ್ಯಕ್ಷರು, ಎಐಸಿಸಿ ಕಾರ್ಯದರ್ಶಿಗಳ ಸಭೆ ಬಳಿಕ ಮೋಹನ್ ಪ್ರಕಾಶ್ ಅವರು ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವ, ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಅವರನ್ನು ಭೇಟಿಯಾಗಿ ಸಮಾಲೋಚಿಸಿದರು.
ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಮಾಜಿ ಡಿಸಿಎಂ ಡಾ| ಜಿ. ಪರಮೇಶ್ವರ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಲಿದೆ.
ಮಂಗಳವಾರ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಟಿಕೆಟ್ ಆಕಾಂಕ್ಷಿಗಳೊಂದಿಗೆ ಸಭೆ ನಡೆಯಲಿದೆ. ಅಲ್ಲಿಗೆ ರಾಜ್ಯಮಟ್ಟದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಳು ಪೂರ್ಣಗೊಂಡಂತೆ ಆಗಲಿದೆ.