ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ನಂತರ ಜೆಡಿಎಸ್ ಪಕ್ಷವು ಕರ್ನಾಟಕದಿಂದ ನಿರ್ನಾಮವಾಗಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಾತನಾಡಿದ ಅವರು, ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಬಂಧಿಸಿದಂತ ಎಚ್.ಡಿ.ಕುಮಾರಸ್ವಾಮಿ ಅವರು ಬಳಸಿರುವ ಅಸಂಸದೀಯ ಪದ ಅವರ ರಾಜಕೀಯ ಹತಾಶೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದ್ದಾರೆ. ಜೆಡಿಎಸ್ ಈಗಾಗಲೇ ಅಳಿವಿನಂಚಿನಲ್ಲಿರುವ ಪಕ್ಷವಾಗಿ ಮಾರ್ಪಟ್ಟಿದೆ. ಚುನಾವಣೆ ನಂತರ ಜೆಡಿಎಸ್ ಕರ್ನಾಟಕದಿಂದ ನಿರ್ನಾಮವಾಗಲಿದೆ ಎಂದಿದ್ದಾರೆ.
ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಅಮಿತ್ ಶಾ ಅವರು, ‘ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಂಡ್ಯ ಒಂದು ಕುಟುಂಬದ ಎಟಿಎಂ ಆಗಲಿದೆ’ ಎಂದು ಟೀಕಿಸಿದ್ದರು. ಇದಕ್ಕೆ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದ ಕುಮಾರಸ್ವಾಮಿ, ‘ಅಮಿತ್ ಶಾ ಅವರೇ, ನೀವು ಸರ್ವಾಧಿಕಾರಿ ಹಿಟ್ಲರನ ಸಂಪುಟದ ಗೊಬೆಲ್ಲನ ಹೊಸ ಅವತಾರ’ ಎಂದು ಲೇವಡಿ ಮಾಡಿದ್ದರು.