ಕಲ್ಬುರ್ಗಿ: ಕಸ್ಟಡಿಯಲ್ಲಿ ಆರೋಪಿಗೆ ಥಳಿತ – ನಾಲ್ಕು ಪೊಲೀಸ್ ಸಿಬ್ಬಂದಿ ಅಮಾನತು

ಕಲಬುರಗಿ: ಕಸ್ಟಡಿಯಲ್ಲಿದ್ದ ಆರೋಪಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿರುವುದಾಗಿ ಕಲಬುರಗಿ ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ್ ಅವರು ಹೇಳಿದ್ದಾರೆ.

ವ್ಯಕ್ತಿಯೋರ್ವನನ್ನು ಠಾಣೆಗೆ ಕರೆತಂದು ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರದ ಚೌಕ್ ಪೊಲೀಸ್ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ವೈ.ಎಸ್.ರವಿಕುಮಾರ್ ಮಾಹಿತಿ ನೀಡಿದ್ದು, ‘ಪೊಲೀಸ್ ಪೇದೆಗಳಾದ ರಾಜಕುಮಾರ್, ಉಮೇಶ್, ಕೇಶುರಾವ್ ಮತ್ತು ಅಶೋಕ್ ಅವರನ್ನು ಅಮಾನತುಗೊಳಿಸಲಾಗಿದೆ. ಅಂತೆಯೇ ಚೌಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಆರ್.ನಾಯ್ಕ್ ಮೇಲೆ ಕಲಂ 7 ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಚೌಕ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳ ವಿರುದ್ಧ ದಾಖಲಾಗಿದ್ದ ದೂರನ್ನು ಪರಿಶೀಲಿಸಿದ ಬಳಿಕ ಮತ್ತು ಕಲಬುರಗಿ-ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರ ಸೂಚನೆಯಂತೆ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆರೋಪಗಳು ಪ್ರಾಥಮಿಕವಾಗಿ ಸಾಬೀತಾದ ಕಾರಣ, 4 ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಮುಂದಿನ ವಿಚಾರಣೆಗಾಗಿ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಸೆಕ್ಷನ್ 7 ರ ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದೇ ನವೆಂಬರ್ 24ರಂದು ಪ್ರಕರಣವೊಂದರ ನಿಮಿತ್ತ ಸೇಡಂ-ಕಲಬುರಗಿ ಟೋಲ್ ಗೇಟ್ ಬಳಿ ದುಂಡಪ್ಪ ಜಮಾದಾರ ಎಂಬಾತನನ್ನು ಚೌಕ ಪೊಲೀಸ್ ಠಾಣೆಗೆ ಕರೆದುಕೊಂಡು ಬರಲಾಗಿತ್ತು. ಈ ವೇಳೆ ಪೊಲೀಸರು ಆತನನ್ನು ಅಮಾನುಷವಾಗಿ ಥಳಿಸಿದ್ದರು. ಈ ಸಂಬಂಧ ಚೌಕ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ಸಂತ್ರಸ್ತ ದುಂಡಪ್ಪ ಜಮಾದಾರ ಸಂಬಂಧಿಕರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದೀಗ ಪೊಲೀಸರು ಕರೆತಂದಿದ್ದ ಪ್ರಕರಣದಲ್ಲಿ ದುಂಡಪ್ಪ ಅಮಾಯಕ ಎಂದು ತಿಳಿದುಬಂದಿದೆ. ಪ್ರಸ್ತುತ ಗಂಭೀರವಾಗಿರುವ ದುಂಡಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Latest Indian news

Popular Stories

error: Content is protected !!