ಉಡುಪಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸ್ವರ್ಣಾ ನದಿಗೆ ಉಡುಪಿ ತಾಲೂಕಿನ ಕಲ್ಯಾಣಪುರ, ಉಪ್ಪೂರು, ಪರಾರಿ ಮತ್ತು ಹಾವಂಜೆ ಭಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ / ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸಿ ಏತ ನೀರಾವರಿ ಮೂಲಕ ಸುತ್ತಮುತ್ತಲಿನ ಕೆರೆ ಕಟ್ಟೆಗಳನ್ನು ತುಂಬಿಸುವ ರೂ. 195.00 ಕೋಟಿ ಮೊತ್ತದ ಯೋಜನೆ ಮಂಜೂರಾಗಿದ್ದು, ತಕ್ಷಣದಲ್ಲಿ ಕಾಮಗಾರಿ ಆರಂಭಿಸುವ ನಿಟ್ಟಿನಲ್ಲಿ ಇಂದು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆನು.
ಉಡುಪಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸ್ವರ್ಣಾ ನದಿಯು ಸಮುದ್ರವನ್ನು ಸೇರುವ ಭಾಗದಲ್ಲಿ ಸಮುದ್ರದ ಉಪ್ಪು ನೀರು ಹಿಮ್ಮುಖವಾಗಿ ನದಿಯಲ್ಲಿ ಬರುವುದರಿಂದ ಸ್ಥಳೀಯವಾಗಿ ಕೃಷಿ ಭೂಮಿಗಳಿಗೆ ಹಾನಿಯಾಗುವ ಜೊತೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಉಂಟಾಗುತ್ತಿತ್ತು. ಈ ನಿಟ್ಟಿನಲ್ಲಿ ಸಮುದ್ರದಿಂದ ಹಿಮ್ಮುಖವಾಗಿ ಬರುವ ಉಪ್ಪು ನೀರಿಗೆ ತಡೆ ಅಣೆಕಟ್ಟು ನಿರ್ಮಿಸಿ ಕೃಷಿ ಭೂಮಿಗೆ ಹಾನಿಯಾಗುವುದನ್ನು ತಪ್ಪಿಸುವುದು ಹಾಗೂ ಕುಡಿಯಲು ಶುದ್ಧ ಸಿಹಿ ನೀರಿನ ಸರಬರಾಜು ಮಾಡಲು ಸ್ವರ್ಣಾ ನದಿಗೆ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಾಣ ಮಾಡಲು ಸ್ಥಳೀಯರು ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರು.
ಯೋಜನೆಯಡಿಯಲ್ಲಿ ಉಡುಪಿ ತಾಲೂಕಿನ ಕಲ್ಯಾಣಪುರ, ಉಪ್ಪೂರು, ಪರಾರಿ ಮತ್ತು ಹಾವಂಜೆ ಭಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸಿ ಏತ ನೀರಾವರಿ ಮೂಲಕ ಹಾವಂಜೆ ಭಾಗದ ಮೂರು ಕೆರೆಗಳನ್ನು ತುಂಬಿಸುವುದು ಮತ್ತು ಮಣಿಪಾಲದ ಮಣ್ಣಪಳ್ಳ ಕೆರೆಯನ್ನು ತುಂಬಿಸುವುದು ಹಾಗೂ ನದಿಯ ಇಬ್ಬದಿಗಳಲ್ಲೂ ನದಿ ಸಂರಕ್ಷಣಾ ಕಾಮಗಾರಿಗಳನ್ನು ನಡೆಸಿ ನದಿ ದಂಡೆಗಳನ್ನು ಸುಭದ್ರ ಗೊಳಿಸುವುದು ಸೇರಿರುತ್ತದೆ. ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಗೊಳ್ಳಲಿದೆ.
ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಮಂಜುಳಾ ನಾಯಕ್, ಉಪ್ಪೂರು ಗ್ರಾಮ ಪಂಚಾಯತ್ ಸದಸ್ಯರಾದ ಅವಿನಾಶ್ ಶೆಟ್ಟಿ ಹಾಗೂ ವಾರಾಹಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಸನ್ನ, ಅಭಿಯಂತರರಾದ ಪ್ರೀತಮ್ ಉಪಸ್ಥಿತರಿದ್ದರು.