ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿಯಿಂದ ಪಶ್ಚಿಮಘಟ್ಟ ವ್ಯಾಪ್ತಿಯ ಜನಜೀವನಕ್ಕೆ ಸಮಸ್ಯೆ – ಶಾಸಕ‌ ಸುನೀಲ್ ಕುಮಾರ್

ಕಸ್ತೂರಿ ರಂಗನ್ ವರದಿಯನ್ನು ಯಥಾವತ್ ಅನುಷ್ಠಾನ ಮಾಡಲಾಗುವುದು ಎಂದು ಅರಣ್ಯ ಸಚಿವ ಶ್ರೀ ಈಶ್ವರ ಖಂಡ್ರೆಯವರು ನೀಡಿರುವ ಹೇಳಿಕೆ ಕಳವಳಕ್ಕೆ ಕಾರಣವಾಗಿದ್ದು ಸರ್ಕಾರ ಈ ವಿಚಾರದಲ್ಲಿ ಆತುರದ ನಿರ್ಣಯ ಕೈಗೊಳ್ಳಬಾರದು ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.


ಈ ವರದಿಯ ಯಥಾವತ್ ಜಾರಿಯಿಂದ ಪಶ್ಚಮಘಟ್ಟ ವ್ಯಾಪ್ತಿಯ ಜನಜೀವನಕ್ಕೆ ಸಮಸ್ಯೆಯಾಗುತ್ತದೆ. ಅರಣ್ಯಾಶ್ರಿತ ಜನರ ಬದುಕು ಹೈರಾಣಾಗುತ್ತದೆ. ಹೀಗಾಗಿ ಕಸ್ತೂರಿ ರಂಗನ್ ವರದಿ ಯಥಾವತ್ ಜಾರಿ ಅವೈಜ್ಞಾನಿಕವಷ್ಟೇ ಅಲ್ಲ, ಅಮಾನವೀಯವೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ.


ಈ ವರದಿ ಜಾರಿ ಬಗ್ಗೆ ಕೇಂದ್ರಕ್ಕೆ ವರದಿ ಕಳುಹಿಸುವುದಕ್ಕೆ ಮುನ್ನ ಇನ್ನಷ್ಟು ಚರ್ಚೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯೋಜನಾ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಪಶ್ಚಿಮಘಟ್ಟ ಪ್ರದೇಶದ ಆರೇಳು ಜಿಲ್ಲೆಯ ಶಾಸಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೆವು. ಈ ಹಿನ್ನೆಲೆಯಲ್ಲಿ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಲು ಅಂದಿನ ಸರ್ಕಾರ ತಾತ್ವಿಕ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಈಗಿರುವ ಕಾಂಗ್ರೆಸ್ ಸರ್ಕಾರ ವರದಿ ಜಾರಿ ಬಗ್ಗೆ ಸಕಾರಾತ್ಮಕ ನಿಲುವು ತಳೆಯುವ ಮೂಲಕ ಈ ಭಾಗದ ಜನರ ನೆತ್ತಿಯ ಮೇಲೆ ತೂಗುಗತ್ತಿ ಇಟ್ಟಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.


ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಜನತೆಯ ಪರವಾಗಿ ಮನವಿ ಮಾಡುತ್ತೇವೆ. ಜನ, ಅರಣ್ಯ, ಬದುಕು ಎಲ್ಲವೂ ಒಂದಕ್ಕೊಂದು ಕೊಂಡಿಯಾಗಿದ್ದು, ಜನರನ್ನು ದೂರವಿಟ್ಟು ನಡೆಸುವ ಸಂರಕ್ಷಣೆ ಎಲ್ಲಿಯೂ ಸಫಲವಾಗಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Latest Indian news

Popular Stories