ಕಾಂಗ್ರೆಸ್​ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಸಿಎಂ ಕಚೇರಿಯಿಂದಲೇ ಯತ್ನ: ಡಿ.ಕೆ ಶಿವಕುಮಾರ್ ಗಂಭೀರ ಆರೋಪ

ಬೆಂಗಳೂರು: ಕಾಂಗ್ರೆಸ್​ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಮತ್ತು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಅನುಮೋದಿಸುವಂತೆ ಸಿಎಂ ಕಚೇರಿಯಿಂದಲೇ ಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಗೆ ಮಾತನಾಡಿದ ಅವರು, ಕಾಂಗ್ರೆಸ್​ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಳಿಸಲು ಯತ್ನ ನಡೆಯುತ್ತಿದೆ. ಸಿಎಂ ಕಚೇರಿ, ಸಿಎಂ ಲೀಗಲ್ ಟೀಂನಿಂದ ಅಧಿಕಾರ ದುರ್ಬಳಕೆ ಮಾಡಲಾಗುತ್ತಿದೆ. ನಮ್ಮ ಅಭ್ಯರ್ಥಿಗಳ ಅಫಿಡವಿಟ್​​ ಡೌನ್​ಲೋಡ್​ ಮಾಡಿಕೊಳ್ಳಲಾಗುತ್ತಿದೆ. ಖುದ್ದು ಸಿಎಂ ಕಚೇರಿಯ ಸೂಚನೆ ಮೇರೆಗೆ ಇದೆಲ್ಲ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

‘ಕಾಂಗ್ರೆಸ್ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸುವ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಕೆಲವು ಅರ್ಜಿಗಳು ದೋಷಪೂರಿತವಾಗಿವೆ. ಆದರೆ ಮುಖ್ಯಮಂತ್ರಿಗಳ ಕಚೇರಿ ನೇರವಾಗಿ ಅಧಿಕಾರಿಯನ್ನು ಕರೆದು ಬದಲಾವಣೆ ಮಾಡುವಂತೆ ಸೂಚಿಸಿದ್ದಾರೆ. ಇದಕ್ಕೆ ಸಿಎಂ ಬೊಮ್ಮಾಯಿಯೇ ನೇರಹೊಣೆ ಹೊರಬೇಕಾಗುತ್ತೆ. ಮುಖ್ಯಮಂತ್ರಿಗಳ ಕಚೇರಿಯ ಕಾಲ್ ಡೀಟೇಲ್ಸ್ ತೆಗೆಯಬೇಕು. ಈ ಬಗ್ಗೆ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನನ್ನ ಅರ್ಜಿಯನ್ನು ತಿರಸ್ಕರಿಸಲು ದೊಡ್ಡ ತಂಡವೊಂದು ಯಾವ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಅದರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ. ಈವರೆಗೂ 10 ಬಾರಿ ನಾಮಪತ್ರ ಸಲ್ಲಿಸಿದ್ದ ನನಗೆ ಈ ರೀತಿ ಮಾಡುತ್ತಿದ್ದಾರೆಂದರೆ ಸಾಮಾನ್ಯ ಅಭ್ಯರ್ಥಿಗೆ ಏನು ಮಾಡಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಸರ್ಕಾರ ಎಲ್ಲಾ ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು, ಅಧಿಕಾರ ದುರ್ಬಳಕೆಯಾಗುತ್ತಿದೆ. ಇದನ್ನು ಚುನಾವಣಾ ಆಯೋಗ ಗಮನಿಸಬೇಕು, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ ಅಭ್ಯರ್ಥಿಗಳಿಂದ ಕಾಂಗ್ರೆಸ್ ಲಂಚ ಪಡೆಯುತ್ತಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿದ ಅವರು, ನಾನು ಶೇ.40 ಕಮಿಷನ್ ಹೊಡೆದಿಲ್ಲ, ಅಭ್ಯರ್ಥಿಗಳ ಟಿಕೆಟ್ ಅರ್ಜಿಗೆ ಹಣ ಪಡೆದಿದ್ದೇವೆ. ಕಟ್ಟಡ ನಿಧಿ ಎಂದು ಪಡೆದಿದ್ದೇವೆ. ಸಾಮಾನ್ಯ ಅಭ್ಯರ್ಥಿಗಳಿಂದ 2 ಲಕ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಂದ 1 ಲಕ್ಷ ರೂಪಾಯಿ ಸಂಗ್ರಹಿಸುತ್ತಿದ್ದೇವೆ. ನಿಮ್ಮ ಶೇ.40 ಕಮಿಷನ್ ಗೆ ಹಲವು ಸಾಕ್ಷ್ಯಗಳು ಸಿಕ್ಕಿವೆ. ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣವೇ ಇದಕ್ಕೆ ಸಾಕ್ಷಿ ಎಂದರು.

ವಿಜಯಪುರ, ಕಲ್ಯಾಣ ಕರ್ನಾಟಕ ಭಾಗದ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್​ ಪಕ್ಷ ಸೇರುತ್ತಿದ್ದಾರೆ. ಕಾಂಗ್ರೆಸ್​ ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಷ್ಟ ಕಾಲದಲ್ಲಿ ಬಿಜೆಪಿ ಯಾವ ರೀತಿ ನಡಿಸಿಕೊಳ್ಳುತ್ತಿದೆ ಎಂಬುದು ಗೊತ್ತಿದೆ. ಯಾರಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಇಚ್ಛೆ ಇದ್ದರೇ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇರ್ಪಡೆಯಾಗಿ. ನಮಗೆ ಶಕ್ತಿ ತುಂಬಿ. ಇಂದು ಬಿಜೆಪಿಯಿಂದ ಅರವಿಂದ್ ಚೌಹಾಣ್, ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾರ್ ಸೇರಿದಂತೆ ಹಲವು ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆಂದು ತಿಳಿಸಿದರು.

ರಾಜ್ಯದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ.

Latest Indian news

Popular Stories