ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಇಂದು 42 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.
ಭಾರೀ ಕುತೂಹಲ ಕೆರಳಿಸಿದ್ದ ಉಡುಪಿ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚನ್ ಟಿಕೆಟ್ ಪಡೆದರೆ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಧಾರವಾಡದಲ್ಲಿ ಟಿಕೆಟ್ ಪಡೆದಿದ್ದಾರೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ, ಕಲಘಟಕಿ ಕ್ಷೇತ್ರದಿಂದ ಸಂತೋಷ್ ಲಾಡ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಟೈಟ್ ಫೈಟ್ ಕ್ಷೇತ್ರವಾದ ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ, ಬಾದಾಮಿ ಬಿ.ಬಿ. ಚಿಮ್ಮನಕಟ್ಟಿ, ಗುಬ್ಬಿ ಕ್ಷೇತ್ರದಲ್ಲಿ ಎಸ್.ಆರ್.ಶ್ರೀನಿವಾಸ್ ಟಿಕೆಟ್ ಪಡೆದಿದ್ದಾರೆ.
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ನಡೆದ ಮ್ಯಾರಥಾನ್ ಸಭೆಗಳ ಬಳಿಕ ಬುಧವಾರವೂ ಪಟ್ಟಿ ಬಿಡುಗಡೆ ಆಗಲೇ ಇಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಒಮ್ಮತ ಮೂಡದಿರುವುದೇ ವಿಳಂಬಕ್ಕೆ ಕಾರಣ. ಹೀಗಾಗಿ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನಷ್ಟೇ ಅಂತಿಮಗೊಳಿಸಿ, ಗುರುವಾರ ಬಿಡುಗಡೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.