ಕಾಂಗ್ರೆಸ್ ಪಾದಯಾತ್ರೆಗೆ ರಾಜ್ಯ ಸರ್ಕಾರ ನಿರ್ಬಂಧ, ತಕ್ಷಣದಿಂದಲೇ ಮೇಕೆದಾಟು ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮೇಕೆದಾಟು ಪಾದಯಾತ್ರೆಯಲ್ಲಿ ಜನ ಹಾಗೂ ವಾಹನಗಳು ಭಾಗವಹಿಸದಂತೆ ನಿರ್ಬಂಧ ವಿಧಿಸಿ ಬುಧವಾರ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಪಾದಯಾತ್ರೆ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯಿದೆ, 2005ರ ಸೆಕ್ಷನ್ 24 (ಎ) (ಬಿ) (ಎಲ್) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ರಾಜ್ಯ ಸರ್ಕಾರವು ಎಲ್ಲಾ ಅಂತರ ಜಿಲ್ಲೆ(ಕರ್ನಾಟಕದೊಳಗೆ) ಮತ್ತು ರಾಮನಗರ ಜಿಲ್ಲೆಯೊಳಗೆ ಯಾವುದೇ ಚಳುವಳಿ, ಪಾದಯಾತ್ರೆ ನಡೆಸದಂತೆ ನಿರ್ದೇಶನ ನೀಡಲಾಗಿದೆ. “ನಮ್ಮ ನೀರು ನಮ್ಮ ಹಕ್ಕು” ಪಾದಯಾತ್ರೆಯಲ್ಲಿ ಭಾಗವಹಿಸುವ ವಾಹನಗಳು ಮತ್ತು ವ್ಯಕ್ತಿಗಳು ಅಥವಾ ಮೇಕೆದಾಟು ನಿಂದ ಬೆಂಗಳೂರಿನವರೆಗೆ ಅದೇ ಉದ್ದೇಶದಿಂದ ಬರುವ ಯಾವುದೇ ವಾಹನ, ಯಾತ್ರೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ಆಕ್ಷೇಪ ಹಿನ್ನೆಲೆಯಲ್ಲಿ ಪಾದಯಾತ್ರೆ ತಡೆಯುತ್ತೇವೆಂದು ಕೋರ್ಟ್​​ಗೆ ಅಫಿಡವಿಟ್ ಸಲ್ಲಿಸಲು ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಅಲ್ಲದೆ ಪಾದಯಾತ್ರೆ ನಡೆಸದಂತೆ ಈವರೆಗೆ ನೀಡಿದ ನೋಟಿಸ್​ಗಳು, ಸೂಚನೆಗಳು, ಮೌಖಿಕ ಮನವಿ, ದಾಖಲಿಸಿರುವ FIR ಸೇರಿ ಎಲ್ಲ ವಿವರ ಒಳಗೊಂಡ ಅಫಿಡವಿಟ್​ ಸಲ್ಲಿಸಲು ನಿರ್ಧಾರ ಮಾಡಲಾಗಿದೆ. ಸಚಿವರು, ಅಧಿಕಾರಿಗಳ ಜತೆ ಚರ್ಚೆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.

Latest Indian news

Popular Stories

error: Content is protected !!