ಕಾಂಗ್ರೆಸ್ ಸೇರುತ್ತಿರುವ ಬಿಜೆಪಿ‌ ನಾಯಕರ ವಿರುದ್ಧ ಶಾಸಕ ಯತ್ನಾಳ ವಾಗ್ದಾಳಿ

ವಿಜಯಪುರ : ಕೋಮುವಾದಿ, ವಿದೇಶಿ ಹಣವನ್ನು ಬಳಕೆ ಮಾಡಿ ಮುಸ್ಲಿಂ ರಾಷ್ಟçವನ್ನಾಗಿಸುವ ಗುರಿ ಹೊಂದಿರುವ ಎಸ್‌ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಜೊತೆ ಹೋಗುವುದದೆಂದರೆ ಏನರ್ಥ ಎನ್ನುವ ಮೂಲಕ ಕಾಂಗ್ರೆಸ್ ಪಾಳಯ ಸೇರುತ್ತಿರುವ ನಾಯಕರ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಮತಗಳಿಂದ ಶಾಸಕರಾಗಿದ್ದೀರಿ, ಮುಖ್ಯಮಂತ್ರಿಯಾಗಿದ್ದೀರಿ, ಎಲ್ಲ ಅಧಿಕಾರವನ್ನು ಪಕ್ಷ ಕೊಟ್ಟಿದೆ, ಆದರೆ ಈಗ ಬಿಜೆಪಿ ಲಿಂಗಾಯತ ವಿರೋಧಿ ಎಂದರೆ ಹೇಗೆ ಎಂದು ಶೆಟ್ಟರ್ ವಿರುದ್ಧ ಗುಡುಗಿದರು.

ನಾನು ಪಕ್ಷವನ್ನು ವಿರೋಧಿಸಿ ಎಂದೂ ಮಾತನಾಡಲಿಲ್ಲ, ನನಗೂ ಉಚ್ಛಾಟನೆ ಮಾಡಲಾಗಿತ್ತು, ಈಗ ಕೆಲವೊಂದು ವಿಷಯ ಬಹಿರಂಗ ಪಡಿಸುತ್ತೇನೆ ಎಂದು ಶೆಟ್ಟರ್ ಹೇಳಿಕೆ ಒಂದು ರೀತಿ ಬ್ಲಾಕ್‌ಮೇಲ್ ಅಷ್ಟೇ ಎಂದರು.

ಕೆ.ಎಸ್. ಈಶ್ವರಪ್ಪ ಅವರಿಗೂ ಟಿಕೇಟ್ ನಿರಾಕರಣೆ ಮಾಡಲಾಗಿದೆ, ಆದರೂ ಅವರು ಪಕ್ಷ ಸಂಘಟನೆ ಮಾಡಲು ಮುಂದಾಗಿಲ್ಲವೇ? ಎಂದು ಪ್ರಶ್ನಿಸಿದರು. ಈ ಮಾತು ನೆಹರೂ ಓಲೇಕಾರ್ ಅವರಿಗೂ ಅನ್ವಯವಾಗುತ್ತದೆ, ಹನೀ ನೀರಾವರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರವಾಗಿದೆ ಎಂದು ಹೇಳಿರುವ ಅವರು ಆಗೇಕೆ ಸುಮ್ಮನಿದ್ದರು? ಈಗ ಟಿಕೇಟ್ ಸಿಗದೇ ಹೋದಾಗ ಈ ಮಾತು ವ್ಯಕ್ತವಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ನೆರೆ ಬಂದಾಗ ರಾಜ್ಯ ಸರ್ಕಾರ ಸ್ಪಂದನೆ ಮಾಡದೇ ಹೋದ ಸಂದರ್ಭದಲ್ಲಿ, ವಿಜಯಪುರ ಸೇರಿದಂತೆ ಹಲವಾರು ಮಹಾನಗರ ಪಾಲಿಕೆಗೆ ಅನುದಾನ ಕಡಿತಗೊಳಿಸಿದಾಗ ಜನರ ಧ್ವನಿಯಾಗಿ ನಾನು ಆಳುವ ಪಕ್ಷದಲ್ಲಿಯೇ ಇದ್ದರೂ ಅದನ್ನು ಹೊರಹಾಕಿದ್ದೆ, ಸರ್ಕಾರದ ವೈಫಲ್ಯಗಳನ್ನು ಟೀಕಿಸಿದ್ದೆ, ಆದರೆ ಈಗ ಕೆಲವರು ಟಿಕೇಟ್ ಸಿಗಲಿಲ್ಲ ಎಂದು ಟೀಕೆ ಮಾಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಎಸ್ ಡಿಪಿಐ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ, ಅಂತಹ ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿಯಾಗಿ ಸಾಕಷ್ಟು ಅಧಿಕಾರ ಅನುಭವಿಸಿದವರೆಲ್ಲ ಪಕ್ಷ ಬಿಟ್ಟು ಹೋರಟಿದ್ದು ಸರಿಯಲ್ಲ ಎಂದರು. ಇಷ್ಟು ದಿನ ಎಲ್ಲ ಅಧಿಕಾರ ಅನುಭವಿಸಿ ಈಗ ಅನ್ಯಾಯ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದೇ ನ್ಯಾಯವೇ ಎಂದು ಪ್ರಶ್ನಿಸಿದ ಅವರು ಮರಳಿ ಬಿಜೆಪಿಗೆ ಬರಬೇಕು ಎಂದು ಮನವಿ ಮಾಡಿಕೊಂಡರು.

ಎಲ್ಲಿ ಅನ್ಯಾಯ. ನನಗೂ ಅನ್ಯಾಯವಾಗಿದೆ. ಆದಾಗ್ಯೂ. ಬಿಜೆಪಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸೂಕ್ತ ಉತ್ತರ ನೀಡುವುದಾಗಿ ತಿಳಿಸಿದರು.

ಬಿಜೆಪಿಯನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ೨೦೨೩ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಆಯ್ಕೆಯಾಗುತ್ತದೆ. ಅನ್ಯ ರೀತಿಯಲ್ಲಿ ಪಕ್ಷದಿಂದ ಸ್ಪರ್ಧಿಸಿದವರ ಠೇವಣಿ ಜಪ್ತಿಯಾಗುತ್ತದೆ ಎಂದರು. ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಮತ್ತೆ ಬರುತ್ತದೆ ಎಂದರು.

ಮತ ಬರುತ್ತವೆ ಎಂಬ ಭಾವನೆಯಿದೆ. ಹಾಗಾಗಿ ಕೆಲವರು ನಮಾಜ್‌ಗೆ ಹೋಗಿ ಬರುತ್ತಾರೆ ಎಂದರು. ಹಿಂದೂತ್ವದ ಮೇಲೆ ಇದ್ದರೆ ಮಾತ್ರ ಗೆಲುವು ಸಾಧ್ಯ ಎಂದರು. ಮೀಸಲಾತಿ ಹೆಚ್ಚು ಮಾಡಿದವರು ಬಿಜೆಪಿಯವರು. ಸೂರ್ಯ ಚಂದ್ರರಿರುವವರೆಗೆ ಮೀಸಲಾತಿ ತೆಗೆಯಲಿಕ್ಕೆ ಸಾಧ್ಯವಿಲ್ಲ ಎಂದರು.

ನಾನು ಸರಳವಾಗಿ ಈ ಬಾರಿ ಪ್ರಚಾರ ಮಾಡುವೆ, ಬ್ಯಾಡಗಿ, ಬಾಗಲಕೋಟೆ ಸೇರಿದಂತೆ ಹಲವಾರು ಭಾಗಗಳಲ್ಲಿ ಪಕ್ಷದ ಪರ ಪ್ರಚಾರ ಮಾಡಲು ಹೋಗುತ್ತಿದ್ದೇನೆ. ಅಬ್ಬರದ ಪ್ರಚಾರ ಮಾಡುವುದಿಲ್ಲ, ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ ಎಂದರು.

ವಿಡಿಎ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ, ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Latest Indian news

Popular Stories