ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ತುಂಬ ಕಳಂಕಿತ ನಾಯಕರೇ: ಬಿಜೆಪಿ

ಬೆಳಗಾವಿ: ವಿಧಾನಸಭೆ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರು ಕಾಂಗ್ರೆಸ್ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗಾಗಿ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕಾಂಗ್ರೆಸ್ ಹಲವಾರು ಕಳಂಕಿತ ನಾಯಕರ ಹೆಸರನ್ನು ಸೇರಿಸಿಕೊಂಡಿದೆ. ಇವರಲ್ಲಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಗಳನ್ನು ಎದುರಿಸುತ್ತಿರುವವರು ಮತ್ತು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದವರೂ ಸೇರಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ಸೋಲನ್ನು ಅನುಭವಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್’ಗೆ ಹೋಲಿಸಿದರೆ ಬಿಜೆಪಿಯು ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಹಲವಾರು ಶ್ರೇಷ್ಠ ನಾಯಕರಿದ್ದಾರೆಂದು ತಿಳಿಸಿದರು.

ಜಗದೀಶ್ ಶೆಟ್ಟರ್ ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಕ್ಕೆ ವಾಗ್ದಾಳಿ ನಡೆಸಿ, ನಾಯಕರೊಬ್ಬರು ತಾವು ತೊರೆದ ಪಕ್ಷವನ್ನು ಟೀಕಿಸುತ್ತಿದ್ದಾರೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದರ ಜೊತೆಗೆ ಪಕ್ಷ ಎಲ್ಲವನ್ನೂ ನೀಡಿದೆ ಎಂದರು.

ತಮ್ಮ ನಿರ್ಗಮನಕ್ಕೆ ರಾಜ್ಯ ಬಿಜೆಪಿ ನಾಯಕರು, ಮುಖ್ಯವಾಗಿ ಬಿ ಎಲ್ ಸಂತೋಷ್ ಕಾರಣ ಎಂಬ ಶೆಟ್ಟರ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿ, ಶೆಟ್ಟರ್ ಪಕ್ಷದ ಹಿರಿಯ ನಾಯಕರಾಗಿದ್ದರು, ಪಕ್ಷದ ಬೆಳವಣಿಗೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ಸಂತೋಷ್ ಅವರನ್ನು ಟೀಕಿಸುವುದು ಪಾಪ ಮಾಡಿದಂತೆ ಎಂದು ಹೇಳಿದರು.

ಏತನ್ಮಧ್ಯೆ, ಮೇ 10 ರಂದು ನಡೆಯುವ ಚುನಾವಣೆಗೆ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದನ್ನು ಒಪ್ಪಿಕೊಳ್ಳದ ಸಿಂಗ್ ಅವರು, ಪಕ್ಷದ ಪ್ರಚಾರ ಸಮಿತಿ ಮುಖ್ಯಸ್ಥರಾಗಿರುವ ಬೊಮ್ಮಾಯಿ ಅವರು ಸಿಎಂ ಆಗಿ ಉತ್ತಮ ಕೆಲಸ ಮಾಡಿದ್ದಾರೆಂದು ಹೇಳಿದರು.

ಬೊಮ್ಮಾಯಿ ಅವರ ನಾಯಕತ್ವದಲ್ಲಿ ಮತ್ತು ಅವರ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಪಕ್ಷವು ಚುನಾವಣೆಯನ್ನು ಎದುರಿಸಲಿದೆ ಎಂದು ತಿಳಿಸಿದರು.

ಬಿಜೆಪಿಯ ಕಾರ್ಯವೈಖರಿ ಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಗಬೇಕು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಜ್ಯಾದ್ಯಂತ ಮೂಲಸೌಕರ್ಯ ಯೋಜನೆಗಳು ಪಕ್ಷದ ಗೆಲುವಿಗೆಸಹಾಯ ಮಾಡುತ್ತದೆ. ಈ ಬಾರಿ 72 ಹೊಸ ಮುಖಗಳನ್ನು ಕಣಕ್ಕಿಳಿಸಲಾಗಿದೆ ಎಂದರು.

Latest Indian news

Popular Stories