ಕಾನಿಪ ಸಮ್ಮೇಳನದ ಪ್ರತಿನಿಧಿ ಸಮಾವೇಶದಲ್ಲಿ ನಿರ್ಣಯ: ಪತ್ರಕರ್ತರ ಸೌಲಭ್ಯಕ್ಕಾಗಿ ಹಕ್ಕೊತ್ತಾಯ ಮಂಡನೆ

ವಿಜಯಪುರ: ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಣೆ, ನಿವೃತ್ತ ಪತ್ರಕರ್ತರಿಗೆ 20 ಸಾವಿರ ರೂ.ಗೆ ಏರಿಕೆ ಸೇರಿದಂತೆ ಹಲವಾರು ಪ್ರರ್ತಕರ್ತರ ಪರವಾದ ಬೇಡಿಕೆಗಳಿಗೆ ಹಕ್ಕೊತ್ತಾಯ ಮಂಡಿಸಲು ನಿರ್ಣಯ ಮಂಡಿಸಲಾಯಿತು.

ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ 37 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದ ಪ್ರಯುಕ್ತ ನಡೆದ ಪ್ರತಿನಿಧಿಗಳ ಸಮಾವೇಶದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಈ ಹಕ್ಕೊತ್ತಾಯದ ನಿರ್ಣಯ ಮಂಡಿಸಿದರು.

ಗ್ರಾಮೀಣ ಭಾಗದಲ್ಲಿ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ ವಿಸ್ತರಣೆ,ನಿವೃತ್ತ ವೇತನವನ್ನು 20 ಸಾವಿರಕ್ಕೆ ಏರಿಕೆ ಮಾಡುವುದು, ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ನಿಧಿ ಸ್ಥಾಪಿಸಿ 100 ಕೋಟಿ ರೂ. ಅನುದಾನ ನೀಡಿಕೆ, ಜಿಲ್ಲಾ ಕೇಂದ್ರಗಳಲ್ಲಿರುವ ಪತ್ರಕರ್ತರ ಭವನವನ್ನು ಕಾನಿಪ ಸಂಘಟನೆಯ ನಿರ್ವಹಣೆಗೆ ಒದಗಿಸುವ ಕಾರ್ಯವನ್ನು ಅನುಷ್ಠಾನ ರೂಪಕ್ಕೆ ತರುವುದು, ಕಡಿಮೆ ವೇತನ ಹೊಂದಿರುವ ಫೋಟೋಗ್ರಾಫರ್‌ಗಳನ್ನು ಅಸಂಘಟಿತ ಕಾರ್ಮಿಕ ಪಟ್ಟಿಗೆ ಸೇರ್ಪಡೆ ಮಾಡುವುದು, ಪತ್ರಕರ್ತರ ಧ್ವನಿ, ಆಶೋತ್ತರಗಳಿಗೆ ಸ್ಪಂದಿಸಲು ಮೇಲ್ಮನೆಯಲ್ಲಿ ಹಿರಿಯ ಪತ್ರಕರ್ತರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡುವುದು, ಪತ್ರಕರ್ತರಿಗೂ ಸಹ ಸರ್ಕಾರದ ವಿವಿಧ ವಸತಿ ಸೌಲಭ್ಯಗಳಲ್ಲಿ ವಿಶೇಷ ಮೀಸಲಾತಿ ಕಲ್ಪಿಸುವುದು, ಸರ್ಕಾರಿ ಜಾಹೀರಾತು ದರವನ್ನು ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡಿ ಜಾಹೀರಾತು ದರ ಹೆಚ್ಚಿಸುವುದು ಹಾಗೂ ಧೀಮಂತ ಪತ್ರಕರ್ತರ ಮೊಹರೆ ಹನುಮಂತರಾಯರ ಅಧ್ಯಯನ ಪೀಠವನ್ನು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವ ಬೇಡಿಕೆಯನ್ನು ಮಂಡಿಸುವ ನಿರ್ಣಯ ಸ್ವೀಕರಿಸಲಾಯಿತು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಉಪಾಧ್ಯಕ್ಷ ಅಜ್ಜಮಾಡ ರಮೇಶ ಕುಟ್ಟಪ್ಪ, ಐಎಫ್‌ಡಬ್ಲೂö್ಯಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿ ಮತ್ತಿಕೆರೆ ಜಯರಾಮ್, ಸೋಮಶೇಖರ ಕೇರಾಗೂಡು, ನಿಂಗಪ್ಪ ಚಾವಡಿ, ವಾಸುದೇವ ಹೊಳ್ಳ ಭಾಗವಹಿಸಿದ್ದರು.

ದಾವಣಗೆರೆಯಲ್ಲಿ 38 ನೇ ಸಮ್ಮೇಳನ
ದಾವಣಗೆರೆಯಲ್ಲಿ 38 ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನ ಆಯೋಜನೆಗೆ ನಿರ್ಣಯ ಸ್ವೀಕರಿಸಲಾಯಿತು.

ಸಮ್ಮೇಳನ ಆಯೋಜನೆಗೆ ದಾವಣಗೆರೆ, ಚಿತ್ರದುರ್ಗ ಕೊಪ್ಪಳ, ಚಿತ್ರದುರ್ಗ ಸೇರಿದಂತೆ ಹಲವಾರು ಜಿಲ್ಲೆಗಳ ಸಂಘಟಕರು ಉತ್ಸಾಹ ತೋರಿ ವಿಚಾರ ಮಂಡಿಸಿದರು. ಕೊನೆಗೆ ದಾವಣಗೆರೆ ಜಿಲ್ಲೆಗೆ ಸಮ್ಮೇಳನ ಸಂಘಟನೆಯ ಆತಿಥ್ಯ ದೊರೆಯಿತು.

Latest Indian news

Popular Stories