ಕಾರವಾರ: ಬಜರಂಗದಳವನ್ನು ಬ್ಯಾನ್ ಮಾಡುವುದೆಂದರೆ ಪಿಎಫ್‌ಐ ಮತ್ತು ಐಎಸ್‌ಐಎಸ್‌ಗೆ ಆಹ್ವಾನ ನೀಡಿದಂತೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶ ಆತಂಕವಾದ, ಅಪರಾಧ ಹಾಗೂ ಮಾಫಿಯಾದ ಸೊಂಟ ಮುರಿದಿದೆ. ಅದರಂತೆಯೇ ಕರ್ನಾಟಕದಲ್ಲೂ ಪಿಎಫ್‌ಐ, ಐಎಸ್‌ಐಎಸ್‌ನ ಸೊಂಟ ಮುರಿಯಲಾಗುವುದು ಎಂದು ಎಚ್ಚರಿಕೆ ನೀಡಲಾಗುವುದು. ಇದೇವೇಳೆ ಹನುಮಾನ್ ಗೆ ಹೆಸರು ಕೇಳಿದರೆ ಭೂತ- ಪಿಶಾಚಿಗಳು ಹೆದರುವಂತೆ ಕಾಂಗ್ರೆಸ್ ಕೂಡ ಹೆದರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಹೊನ್ನಾವರದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ ತನ್ನ ಸುರಕ್ಷತೆಯನ್ನು ಸದೃಢಗೊಳಿಸಿಕೊಂಡಿದೆ ಎಂದು ತಿಳಿಸಿದರು. ಭಾರತದ ಟೀಮ್ ಲೀಡರ್‌ನಂತೆ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಜಗತ್ತಿನ ಅಗ್ರಗಣ್ಯ ರಾಷ್ಟ್ರವಾಗಿ ರೂಪುಗೊಂಡಿದೆ ಎಂದರು.
ಕಾಂಗ್ರೆಸ್‌ನವರು ಯಾಕೆ ಹನುಮಾನನನ್ನು ವಿರೋಧಿಸುತಿದ್ದಾರೆಂಬುದು ಈಗ ತಿಳಿಯುತ್ತಿದೆ. ಹನುಮಾನನ ಹೆಸರು ಕೇಳಿದರೆ ಭೂತ- ಪಿಶಾಚಿಗಳು ನಮ್ಮ ಬಳಿ ಸುಳಿಯುವುದಿಲ್ಲ (ಭೂತ್ ಪಿಶಾಚ್ ನಿಕಟ್ ನಹೀಂ ಆವೈ, ಮಹಾವೀರ್ ಜಬ್ ನಾವ್ ಸುನಾವೆ). ಎಷ್ಟೇ ರಾಕ್ಷಸಿ ಶಕ್ತಿಗಳಿದ್ದರೂ ಭಜರಂಗ ಬಲಿ ಎದುರು ಮಾಯವಾಗಿಬಿಡುತ್ತವೆ. ಹೀಗಾಗಿ ರಾಕ್ಷಸೀ ಪ್ರವೃತ್ತಿಯ ಕಾಂಗ್ರೆಸ್ ನಾಶವಾಗುವ ಆತಂಕದಿಂದ ವಿರೋಧ ಮಾಡುತ್ತಿದೆ ಎಂದರು.
ಭಾರತದ ವಿಕಾಸವನ್ನು ಸ್ವೀಕರಿಸದಿರುವವರು ಪ್ರಧಾನಿ ಮೋದಿಯವರನ್ನ ವಿರೋಧ ಮಾಡುತ್ತಿದ್ದಾರೆ. ಅದೇ ಜನ ಕರ್ನಾಟಕಕ್ಕೆ ಆಗಮಿಸಿ ಪಿಎಫ್‌ಐ, ಐಎಸ್‌ಐಎಸ್‌ಐನ ಸ್ಲೀಪರ್‌ಸೆಲ್‌ಗೆ ಆಹ್ವಾನ ನೀಡುತ್ತಿದ್ದು, ಬಜರಂಗದಳದಂತಹ ಸಾಮಾಜಿಕ ಹಾಗೂ ರಾಷ್ಟ್ರವಾದಿ ಸಂಘಟನೆಯನ್ನು ಬ್ಯಾನ್ ಮಾಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದರು.