ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದರೂ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಫೈಟ್ (Hassan JDS Ticket Fight) ಇನ್ನೂ ಮುಗಿದಿಲ್ಲ. ಒಂದೆಡೆ, ತನಗೆ ಟಿಕೆಟ್ ನೀಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುತ್ತೇನೆ ಎಂದು ಭವಾನಿ ರೇವಣ್ಣ (Bhavani Revanna) ಎಚ್ಚರಿಕೆ ನೀಡಿದ್ದರೆ, ಇನ್ನೊಂದೆಡೆ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy), ಕಾರ್ಯಕರ್ತನಿಗೆ ಟಿಕೆಟ್ ನೀಡುವ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ದೇವೇಗೌಡರಿಗೆ (HD Deve Gowda) ಎಮೋಷನಲ್ ಬ್ಲ್ಯಾಕ್ಮೇಲ್ ಮಾಡಬಹುದು. ಆದರೆ ಇದೆಲ್ಲ ನನ್ನ ಹತ್ತಿರ ನಡೆಯುವುದಿಲ್ಲ ಎಂದು ಭವಾನಿ ರೇವಣ್ಣಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಕಾರ್ಯಕರ್ತನಿಗೆ ಟಿಕೆಟ್ ಅಂತಾ ನಿರಂತರವಾಗಿ ಹೇಳಿದ್ದೇನೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಒಬ್ಬ ಕಾರ್ಯಕರ್ತನೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ಯಾರು ಸಮರ್ಥವಾಗಿದ್ದಾರೆಂದು ನನಗೂ ಗೊತ್ತು, ನಿಮಗೂ ಗೊತ್ತು. ಕಾರ್ಯಕರ್ತೇ ಯಾರಿಗೆ ಟಿಕೆಟ್ ಅಂತ ಕೂಗುತ್ತಿದ್ದಾರೆ. ತೀರ್ಮಾನ ಆಗಿದೆ. ಸದ್ಯದಲ್ಲೇ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ ಆಗುತ್ತದೆ. ನನ್ನ ಪಕ್ಷದ ಜವಾಬ್ದಾರಿ ಬಳಿಕ ನನಗೆ ಕಾರ್ಯಕರ್ತ ಮುಖ್ಯ. ಎಲ್ಲರನ್ನೂ ಒಂದುಗೂಡಿಸಿ ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದೇವೆ. ಅತ್ಯಂತ ತಾಳ್ಮೆಯಿಂದ ನಡೆದುಕೊಂಡಿದ್ದೇನೆ. ಯಾವುದೇ ಬ್ಲ್ಯಾಕ್ಮೇಲ್ಗೆ ಹಿಂದೆ ಸರಿಯಲ್ಲ, ನನಗೆ ಪಕ್ಷ ಮುಖ್ಯ ಎಂದರು.