ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟದಲ್ಲಿರುವ ಖಾಸಗಿ ಕಾಲೇಜೊಂದರ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ ಕಾಲೇಜಿನ ಬಾತ್‍ರೂಮಿನಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಕೋಮಲಾಪೂರ ಗ್ರಾಮದ ಪದ್ಮಾವತಿ ಸಂಜಯ ಮೇಟಿ (17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ಪದ್ಮಾವತಿ ಬಾತ್‍ರೂಂ ಒಳಗಿನಿಂದ ಚಿಲಕ ಹಾಕಿಕೊಂಡು ನಲ್ಲಿ ನೀರು ಚಾಲೂ ಇರಿಸಿ ಪ್ಲಾಸ್ಟಿಕ್ ವಯರ್ ನಿಂದ ನೇಣು ಬಿಗಿದುಕೊಂಡಿದ್ದಾಳೆ, ಕೆಲವು ಸಮಯ ಕಳೆದರು ಹೊರಗೆ ಬಾರದಿರುವುದನ್ನು ಕಂಡು ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೆ ಪೋಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸಿಪಿಐ ಮಲ್ಲಿಕಾರ್ಜುನ ತುಳಸೀಗೆರೆ, ಕ್ರೈಂ ಪಿಎಸೈ ಎಚ್.ಬಿ.ಸುತಗುಂಡಾರ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಬಂದು ಬಾಗಿಲು ಒಡೆದು ವಿದ್ಯಾರ್ಥಿನಿಯನ್ನು ಪರಿಶೀಲಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.
ಪೊಲೀಸರು ತನಿಖೆ ನಡೆಸಿದ ಸಂದರ್ಭ ಆಕೆಯ ನೋಟಬುಕ್‍ನಲ್ಲಿ ಡೆತ್ ನೋಟ್ ಸಿಕ್ಕಿದ್ದು ತನಗೆ ವಿಜ್ಞಾನ ವಿಷಯ ಓದಲು ಇಷ್ಟವಿಲ್ಲ ಎಂದು ಬರೆದುಕೊಂಡಿದ್ದಾಳೆ, ಪಾಲಕರ ಮನಸ್ಸೂ ನೋಯಿಸಲು ಇಷ್ಟವಿಲ್ಲದಿರುವುದನ್ನು ಬರೆದು ತನ್ನನ್ನು ಕ್ಷಮಿಸುವಂತೆ ಕೋರಿದ್ದಾಳೆ ಎನ್ನಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಕುರಿತು ಪ್ರಕರಣ ದಾಖಲಿಸಿದ್ದು ಪೊಲೀಸರು ಕಾನೂನು ಕ್ರಮ ಕೈಕೊಂಡಿದ್ದಾರೆ.