ಕಾಶ್ಮೀರಿಗಳು ಭಿಕ್ಷುಕರಲ್ಲ; ಚುನಾವಣೆ ನಮ್ಮ ಹಕ್ಕು: ಒಮರ್ ಅಬ್ದುಲ್ಲಾ

ಶ್ರೀನಗರ: ಚುನಾವಣೆ ಜನರ ಹಕ್ಕು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವಂತೆ ಕಾಶ್ಮೀರಿಗಳು ಕೇಂದ್ರದ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಮಂಗಳವಾರ ಹೇಳಿದ್ದಾರೆ.

“ಈ ವರ್ಷ ಚುನಾವಣೆ ನಡೆಯದಿದ್ದರೂ ಪರವಾಗಿಲ್ಲ! ಆದರೆ ನಾವು ಭಿಕ್ಷುಕರಲ್ಲ. ಕಾಶ್ಮೀರಿಗಳು ಭಿಕ್ಷುಕರಲ್ಲ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. ಚುನಾವಣೆ ನಮ್ಮ ಹಕ್ಕು ಆದರೆ ಈ ಹಕ್ಕಿಗಾಗಿ ನಾವು ಕೇಂದ್ರದ ಮುಂದೆ ಭಿಕ್ಷೆ ಬೇಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ತಿಳಿಸಿದ್ದಾರೆ.

ಇಂದು ಅನಂತನಾಗ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಮರ್ ಅಬ್ದುಲ್ಲಾ ಅವರು, ಜನ ಮತ್ತೆ ಚುನಾವಣೆ ನಡೆಸಬೇಕು ಎಂದು ಬಯಸುತ್ತಾರೆ. ನಮಗೆ ಚುನಾವಣೆಗಳು ಬೇಕು. ಆದರೆ ಅವರು ಅದನ್ನು ಮಾಡಲು ಬಯಸದಿದ್ದರೆ, ಹಾಗೆಯೇ ಆಗಲಿ ಎಂದಿದ್ದಾರೆ.

ಆಸ್ತಿಗಳು ಮತ್ತು ಸರ್ಕಾರಿ ಭೂಮಿಯಿಂದ ಜನರನ್ನು ತೆರವುಗೊಳಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯದಿರಲು ಇದು ಒಂದು ಕಾರಣ ಎಂದರು.

ಅದಕ್ಕಾಗಿಯೇ ಅವರು ಚುನಾವಣೆ ನಡೆಸುತ್ತಿಲ್ಲ. ಜನರಿಗೆ ಕಿರುಕುಳ ನೀಡಲು ಅವರು ಬಯಸುತ್ತಾರೆ. ಜನರ ಗಾಯಗಳಿಗೆ ಮುಲಾಮು ಹಚ್ಚುವ ಬದಲು, ಅವರು ನೋವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದರು.

Latest Indian news

Popular Stories