ನವದೆಹಲಿ: ಕಾಶ್ಮೀರಿ ಪಂಡಿತ ನೌಕರರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಂಗಳವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕೇಸರಿ ಪಕ್ಷದ “ಬಳಸಿ ಬಿಸಾಕುವ ಮತ್ತು ದ್ರೋಹ ಮಾಡುವ” ನೀತಿಯೇ ಅವರ ದುಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.
“ತಮ್ಮ ‘ಜೀವದ ಹಕ್ಕು’ ಮತ್ತು ‘ಸ್ಥಳಾಂತರ’ಕ್ಕೆ ಒತ್ತಾಯಿಸಿ ಕಾಶ್ಮೀರಿ ಪಂಡಿತ ನೌಕರರು 245ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ತಿಂಗಳಿಂದ ಅವರ ಸಂಬಳವನ್ನು ತಡೆಹಿಡಿಯಲಾಗಿದೆ ಮತ್ತು ಅವರ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರಿ ಪಂಡಿತ ನೌಕರರ ದುಸ್ಥಿತಿಗೆ ಬಿಜೆಪಿಯ ‘ಬಳಸಿ ಬಿಸಾಕುವ, ದ್ರೋಹ ಮಾಡುವ’ ನೀತಿಯೇ ಕಾರಣ ಎಂದು ಖರ್ಗೆ ಆರೋಪಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಚದೂರದಲ್ಲಿ ಕಚೇರಿಯಲ್ಲಿಯೇ ಕಾಶ್ಮೀರಿ ಪಂಡಿತ್ ಉದ್ಯೋಗಿ ರಾಹುಲ್ ಭಟ್ ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಈ ಹತ್ಯೆಯ ನಂತರ ಕಾಶ್ಮೀರಿ ಪಂಡಿತ ನೌಕರರು ಕೆಲಸಕ್ಕೆ ಮರಳಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.