ಕಿಚ್ಚ ಸುದೀಪ್ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಸ್ಯಾಂಡಲ್ ವುಡ್ ನಟ, ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಸೇರ್ಪಡೆಯಾಗುತ್ತಾರೆಯೇ, ಇಲ್ಲ ಸ್ಟಾರ್ ಪ್ರಚಾರಕರಾಗಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆಯೇ ಎಂಬ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಈ ನಡುವೆ ಇಂದು ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸುದ್ದಿಗೋಷ್ಠಿಯನ್ನು ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆಸಲಿದ್ದು ಅದರಲ್ಲಿ ಕಿಚ್ಚ ಸುದೀಪ್ ಭಾಗಿಯಾಗುತ್ತಿದ್ದಾರೆ. ಅದರಲ್ಲಿ ತಮ್ಮ ನಡೆಯನ್ನು ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಿಕ್ಕಿದಾಗ ಈ ಬಗ್ಗೆ ಸುದ್ದಿಗಾರರು ಕೇಳಿದಾಗ, ಸುದೀಪ್ ಸೇರ್ಪಡೆ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ. ಹೈದರಾಬಾದ್ ನಲ್ಲಿರುವ ಕಿಚ್ಚ ಸುದೀಪ್ ಇನ್ನು ಕೆಲವೇ ಹೊತ್ತಿನಲ್ಲಿ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.

ಈ ಸುದ್ದಿ ಬರುತ್ತಿದ್ದಂತೆ ಮಾಧ್ಯಮ ಪ್ರತಿನಿಧಿಗಳು ಅವರನ್ನು ಸಂಪರ್ಕಿಸಿದಾಗ, ನೇರವಾಗಿ ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಎಲ್ಲವನ್ನೂ ತಿಳಿಸುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. 

ಕಿಚ್ಚ ಸುದೀಪ್ ಬಗ್ಗೆ ಇಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಸುದೀಪ್ ಬಹಳ ದೊಡ್ಡ ಕಲಾವಿದ, ಅವರು ಸೇರ್ಪಡೆಯಾದರೆ ಸ್ವಾಗತಿಸುತ್ತೇನೆ. ಅವರ ಸೇರ್ಪಡೆಯಿಂದ ಪಕ್ಷಕ್ಕೆ ಬಲ ಸಿಗಲಿದೆ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಸುದೀಪ್ ಬಿಜೆಪಿ ಜಾಯಿನ್ ಆದರೆ ಆಗಲಿ ಬಿಡಿ, ನಮಗೇನು ಎಂದಿದ್ದಾರೆ. 

Latest Indian news

Popular Stories