ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ

ಕುಂದಾಪುರ: ವಿಧಾನ ಪರಿಷತ್‌ ಮಾಜಿ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ವಿ ಅವರು ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ಜ. 16 ರಂದು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಕೆಪಿಸಿಸಿಗೆ ರವಾನಿಸಿದ್ದಾರೆ.

ಪ್ರತಿಯನ್ನು ಎಐಸಿಸಿಗೆ ಕೂಡಾ ಕಳುಹಿಸಿದ್ದಾರೆ. ಪ್ರತಾಪಚಂದ್ರ ಶೆಟ್ಟಿ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿಯುತ್ತಿದ್ದಾರೆ, ನಿವೃತ್ತರಾಗುತ್ತಿದ್ದಾರೆ.

ವಿವಿಧ ಬ್ಲಾಕ್‌ಗಳಿಂದ ಕೆಪಿಸಿಸಿಗೆ ಸದಸ್ಯತ್ವ ನೀಡುವ ವಿಚಾರದಲ್ಲಿ ನಡೆದ ಬೆಳವಣಿಗೆಗೆ ಅಸಮಾಧಾನದಿಂದ ರಾಜೀನಾಮೆ ನೀಡಿದ್ದಾರೆ.

ವಿಷಯ ತಿಳಿದ ಕಾಂಗ್ರೆಸ್‌ ನಾಯಕರು ಮನೆಗೆ ತೆರಳಿ ಮನವೊಲಿಸುವ ಕೆಲಸ ಮಾಡಿದ್ದಾ ರೆಂದು ಎಂದು ಜಾಲತಾಣದಲ್ಲಿ ಸುದ್ದಿಯಾಗಿತ್ತು. ಮಂಗಳವಾರ ತಡ ರಾತ್ರಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೂಡಾ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪತ್ರಿಕೆ ಪ್ರತಾಪಚಂದ್ರ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ, ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕೆಪಿಸಿಸಿ ಸದಸ್ಯತ್ವಕ್ಕೆ ಮಾತ್ರ ರಾಜೀನಾಮೆ ನೀಡಿದ್ದು. ಆ ಜಾಗದಲ್ಲಿ ಸೂಕ್ತ, ಆಸಕ್ತ ಮುಖಂಡರಿಗೆ ಅವಕಾಶ ಮಾಡಿಕೊಡಬೇಕು . ಪಕ್ಷ ಸಂಘಟನೆಗೆ ಸಹಾಯವಾಗಬೇಕು ಎಂಬ ನಿಟ್ಟಿನಲ್ಲಿ ರಾಜೀನಾಮೆ ನೀಡಿದ್ದೇನೆ ವಿನಾ ಪಕ್ಷಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಐಸಿಸಿ ಕಾರ್ಯದರ್ಶಿ ಕೇರಳ ಶಾಸಕ ರೋಜಿ ಎಂ. ಜಾನ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌ . ಧ್ರುವನಾರಾಯಣ ಅವರು ಕೆ. ಪ್ರತಾಪಚಂದ್ರ ಶೆಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಪ್ರಜಾಧ್ವನಿ ಸಮಾವೇಶ ಯಶಸ್ವಿ ಕುರಿತು ಮತ್ತು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕುಮಾರ ಕೊಡವೂರು ,ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ , ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸತೀಶ ಕಿಣಿ ಬೆಳ್ವೆ , ಹಾಲಾಡಿ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಶೆಟ್ಟಿ ಚೋರಾಡಿ ಉಪಸ್ಥಿತರಿದ್ದರು.

Latest Indian news

Popular Stories