ನವದೆಹಲಿ: ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚೊಚ್ಚಲ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಮತ್ತು ಹಣಕಾಸು ಮಸೂದೆಗೆ ಅನುಮೋದನೆ ಪಡೆಯುವುದು ಸರ್ಕಾರದ ಆದ್ಯತೆಯಾಗಿದ್ದರೂ, ರಾಷ್ಟ್ರವ್ಯಾಪಿ ಜಾತಿ ಆಧಾರಿತ ಆರ್ಥಿಕ ಗಣತಿ, ಅದಾನಿ-ಹಿಂಡನ್‌ಬರ್ಗ್ ವಿವಾದ ಮತ್ತು ಮಹಿಳಾ ಮೀಸಲಾತಿ ಮಸೂದೆ ಸೇರಿದಂತೆ ಹಲವಾರು ವಿಷಯಗಳ ಮೇಲೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಜ್ಜಾಗಿವೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಜನಪ್ರಿಯ ಬಜೆಟ್ ಮಂಡನೆಯ ಸಾಧ್ಯತೆ ದಟ್ಟವಾಗಿದೆ.
ಫೆ
.14ಕ್ಕೆ ಅಧಿವೇಶನ ಮುಕ್ತಾಯವಾಗಲಿದ್ದು, ಮಾ.12ರಿಂದ ಬಜೆಟ್ ಅಧಿವೇಶನದ ಚರ್ಚೆಯ ಎರಡನೆಯ ಕಂತು ಆರಂಭವಾಗಲಿದೆ.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಸೋಮವಾರ ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿತು. ಆಮ್ ಆದ್ಮಿ ಪಕ್ಷ, ಡಿಎಂಕೆ, ಎಡಪಕ್ಷಗಳು, ಆರ್‌ಜೆಡಿ, ಜೆಡಿಯು, ಟಿಆರ್‌ಎಸ್, ಟಿಎಂಸಿ, ಬಿಜೆಡಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಭಾಗವಹಿಸಿದ್ದವು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಮಾರೋಪಕ್ಕೆ ತೆರಳಿದ್ದ ಕಾಂಗ್ರೆಸ್ ನಾಯಕರು ಸರ್ವಪಕ್ಷ ಸಭೆಗೆ ಗೈರಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರ ಕೊನೆಯ ಪೂರ್ಣ ಬಜೆಟ್ ಇದಾಗಿದೆ. ಈ ಹಿನ್ನಲೆ ಸಂಬಳ ಪಡೆಯುವ ನೌಕರರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಾಮಾನ್ಯ ಜನರಿಗೆ ವಿವಿಧ ತೆರಿಗೆ ಪರಿಹಾರ ಕ್ರಮಗಳನ್ನು ಸೀತಾರಾಮನ್ ಘೋಷಿಸುವ ನಿರೀಕ್ಷೆಯಿದೆ. ಇದರ ಜೊತೆಗೆ ಜನರ ನಿರೀಕ್ಷೆಗಳು ಸರ್ಕಾರದಿಂದ ಹೆಚ್ಚಿದೆ.