ಕೇಂದ್ರ ಸರಕಾರದ ನೋಟು ರದ್ದತಿ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್!

ನವದೆಹಲಿ: ನೋಟು ಅಮಾನೀಕರಣದ ಕುರಿತು ಸುಪ್ರೀಂ ತೀರ್ಪು ಹೊರಬಿದ್ದಿದ್ದು ಕೇಂದ್ರ ಸರಕಾರದ ಕ್ರಮವನ್ನು ಎತ್ತಿ ಹಿಡಿದೆ.

ಐದು ಮಂದಿಯ ನ್ಯಾಯಪೀಠ 4-1 ಆದೇಶದ ಮೇರೆಗೆ ಕೇಂದ್ರ ಸರಕಾರ ಪರ ಆದೇಶ ಹೊರಡಿಸಿದೆ. ಕೇಂದ್ರ ಸರಕಾರದ ನೋಟ್ ಬಂಧಿ ಕ್ರಮ ಬಹಳಷ್ಟು ಟೀಕೆಗೆ ಗುರಿಯಾಗಿ ಸುಪ್ರೀಂ ಮೆಟ್ಟಿಲೇರಿತ್ತು. ಇದೀಗ ತೀರ್ಪು ಕೇಂದ್ರ ಸರಕಾರ ಪರ ಬಂದಿದೆ.

ಒಂದು ಸಾವಿರ ರೂ. ಮತ್ತು 500 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿ 2016ರಲ್ಲಿ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ಪ್ರಕಟಿಸಿದೆ.

ಕೇಂದ್ರ ಸರ್ಕಾರ ಮಾಡಿದ್ದ ನೋಟ್ ಬ್ಯಾನ್ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸುವುದಿಲ್ಲ ಎಂದಿದೆ.

ನೋಟು ಬದಲಾಯಿಸಲು ನೀಡಿದ ಕಾಲಾವಕಾಶ ಸರಿಯಾಗಿದೆ. ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ  ಆರ್ ಬಿಐ ಮತ್ತು ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿದ್ದವು. ಅಂತಹ ಕ್ರಮವನ್ನು ತರಲು ಸಮಂಜಸವಾದ ಸಂಬಂಧವಿತ್ತು ಎಂದು ಪೀಠ ಭಾವಿಸಿದೆ ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಸ್‌.ಎ. ನಜೀರ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜ. 2ರಂದು ತೀರ್ಪು ಪ್ರಕಟಿಸಿದೆ. ಮೂಡುಬಿದಿರೆ ಮೂಲದವರಾದ ನ್ಯಾ| ನಜೀರ್‌ ಜ. 4ರಂದು ನಿವೃತ್ತರಾಗಲಿದ್ದಾರೆ.

ಡಿ. 7ರಂದು ನ್ಯಾಯಪೀಠವು ನೋಟು ಅಮಾನ್ಯ ನಿರ್ಧಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಕೇಂದ್ರ ಸರಕಾರ ಮತ್ತು ಆರ್‌ಬಿಐಗೆ ಸೂಚಿಸಿತ್ತು. ನೋಟು ರದ್ದು ಪ್ರಶ್ನಿಸಿ ಒಟ್ಟು 58 ಅರ್ಜಿಗಳು ಸಲ್ಲಿಕೆಯಾಗಿದ್ದವು.

Latest Indian news

Popular Stories